ಕೈಗಾ 5, 6ನೇ ಘಟಕ ಕೈಬಿಡಲು ಪ್ರಧಾನಿಗೆ ಸ್ವರ್ಣವಲ್ಲಿ ಶ್ರೀ ಪತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಉ ಕ ಜಿಲ್ಲೆಯ ಪರಿಸರ, ಅರಣ್ಯ, ಜನಜೀವನಕ್ಕೆ ಕೈಗಾ ಯೋಜನೆ ಮಾರಕವಾಗಿದ್ದು ಅದರಲ್ಲೂ ಪ್ರಸ್ತಾವಿತ ಕೈಗಾ 5ನೇ, 6ನೇ ಘಟಕ ಸ್ಥಾಪನೆಯನ್ನು ಕೇಂದ್ರ ಸರ್ಕಾರ ಕೈ ಬಿಡುವ ಮೂಲಕ ಜಿಲ್ಲೆಯ ಪರಿಸರ ಸಂರಕ್ಷಣೆಗೆ ಸಹಯೋಗ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಸೋಮವಾರ ಮಹತ್ವದ ಪತ್ರ ಬರೆದು ಮನವಿ ಮಾಡಿದ್ದಾರೆ.

ಪರಿಸರವೂ ಸಹ ದೇಶ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ವರ್ಣವಲ್ಲಿ ಮಠವೂ ಹಲವು ವರ್ಷದಿಂದ ಉ ಕ ಜಿಲ್ಲೆಯ ಪರಿಸರ ಸಂರಕ್ಷಣೆ ವಿಷಯದಲ್ಲಿ ಶ್ರಮ ವಹಿಸಿದೆ. ಈ ನಡುವೆ ಕೈಗಾದ 5 ಮತ್ತು 6ನೇ ಘಟಕ ಸ್ಥಾಪನೆ ಸುದ್ದಿಯಿಂದ ಜಿಲ್ಲೆಯ ಜನರು ಆತಂಕಿತರಾಗಿದ್ದು, ಈ ನಿಟ್ಟಿನಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಮಿತಿ, ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿಯು ಮಹತ್ವದ ದಾಖಲೆಪಡಿಸಿದ್ದು, ಅದನ್ನು ಪರಿಶೀಲಿಸಿ ಉ ಕ.ಕ್ಕೆ ಬಂದ ಈ ಆತಂಕ ನಿವಾರಿಸಲು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಪ್ರಮುಖ ಅಂಶಗಳು

ಐದು ಮತ್ತು ಆರನೇ ಘಟಕದಲ್ಲಿ 700 ಮೆಗಾವ್ಯಾಟ್ ವಿದ್ಯುತ್ ಯೋಜನೆ ಆಗಿದ್ದು ಜಿಲ್ಲೆಯ ಜನರ, ಪರಿಸರ ದೃಷ್ಟಿಯಿಂದ ಇದರ ಬಗ್ಗೆ ಗಂಭೀರ ಪರಿಶೀಲನೆ ಆಗಬೇಕು. ಜಗತ್ತಿನಲ್ಲೇ ಯಾವ ಅಣುಸ್ಥಾವರವೂ ನಿತ್ಯ ಹರಿದ್ವರ್ಣ ಅಥವಾ ಸದಾ ಮಳೆ ಬೀಳುವ ಪ್ರದೇಶದಲ್ಲಿಲ್ಲ. ಕೈಗಾ ಮಾತ್ರ ಸಂಪೂರ್ಣ ಮಳೆ, ಅತಿ ಹೆಚ್ಚು ಅರಣ್ಯ ಆವರಿತ ಪ್ರದೇಶದಲ್ಲಿದೆ. ಪರಿಸರ ಸೂಕ್ಷ್ಮ, ವಿಶ್ವದ ಪ್ರಮುಖ ಜೀವವೈವಿಧ್ಯ ತಾಣಗಳು ಇಲ್ಲಿವೆ. ಈಗಾಗಲೇ ಕೈಗಾದಿಂದ ಸಾಕಷ್ಟು ಪರಿಸರದ ಮೇಲೆ ಗಂಭೀರ, ಕೆಟ್ಟ ಪರಿಣಾಮ ಬೀರಿದ್ದು, ಹವಾಮಾನ ವೈಪರೀತ್ಯವೂ ಆಗಿದೆ. ಇದೀಗ ಹೊಸ ಘಟಕ, ಹೊಸ ಲೈನ್ ಹಾಕುವುದರಿಂದ ದೊಡ್ಡ ಪ್ರಮಾಣದಲ್ಲಿ ಅರಣ್ಯ, ಪರಿಸರ ನಾಶದ ಜತೆಗೆ ಜನಜೀವನದ ಮೇಲೂ ಗಂಭೀರ ಪರಿಣಾಮ ಆಗಲಿದೆ. ಇದಲ್ಲದೇ ಕಳೆದ 2 ದಶಕದಿಂದ ಕೈಗಾ ಸೂಕ್ತ ಜನರಿಗೆ ಕ್ಯಾನ್ಸರ್ ಸಹಿತ ಹಲವು ಮಾರಣಾಂತಿಕ ರೋಗಗಳು ಬಂದಿದ್ದು, ವಿಶೇಷವಾಗಿ ಅರಣ್ಯ ಅವಲಂಬಿತರು, ಬುಡಕಟ್ಟು ಜನರು, ಸಣ್ಣ ರೈತರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತೆ ಹೊಸ ಘಟಕಗಳು ಇಲ್ಲೇ ನಿರ್ಮಾಣವಾದರೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಈ ಭಾಗದ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚುವ ಅಪಾಯ ಇದೆಯೆಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಕಳೆದ 30 ವರ್ಷದಿಂದ ಜಿಲ್ಲೆಯಲ್ಲಿ ಅಣುಸ್ಥಾವರದ ವಿರುದ್ಧ ಹೋರಾಟ ನಡೆಯುತ್ತಲೇ ಬಂದಿದೆ. 90ರ ದಶಕದಲ್ಲಿ ಪೇಜಾವರ ಶ್ರೀಗಳು, ಡಾ ಶಿವರಾಮ ಕಾರಂತರಂತಹ ಹಿರಿಯರು ಅಂದು ಹೋರಾಟದ ನೇತೃತ್ವ ವಹಿಸಿದ್ದರು. ಇತ್ತೀಚೆಗೆ ಯಲ್ಲಾಪುರದಲ್ಲೂ 10,000 ಜನರು ಸೇರಿ 5 ಮತ್ತು 6ನೇ ಘಟಕ ವಿರೋಧಿಸಿ ಬೃಹತ್ ಸಭೆ ನಡೆಸಿದ್ದು, ಯಾವುದೇ ರೀತಿ ಹೋರಾಟ ಮಾಡಿಯಾದರೂ ಈ ಘಟಕ ಆರಂಭ ನಿಲ್ಲಿಸಲು ನಿರ್ಧರಿಸಿದ್ದಾರೆ. ಸರ್ಕಾರ ಜನರ ಭಾವನೆಗೆ ಸ್ಪಂದಿಸಿ, ಕೈಗಾ 5 ಮತ್ತು 6ನೇ ಘಟಕ ಯೋಜನೆ ಕೈಬಿಡಬೇಕು. ಅತಿ ಮುಖ್ಯವಾಗಿ ನ್ಯೂಕ್ಲಿಯರ್ ಘಟಕ ಹಾಗೂ ಅಣುವಿದ್ಯುತ್ ಸಹ ಬಹಳ ದುಬಾರಿಯಾಗಿದ್ದು, ಪರಿಸರ ಮಾರಕವೇ ಆಗಿದೆ. ಅದರ ಬದಲು ಪರಿಸರ ಪೂರಕ ಹಾಗೂ ಬಹಳ ಕಡಿಮೆ ಬೆಲೆಯ ಗಾಳಿ, ಸೌರವಿದ್ಯುತ್ತಿಗೆ ಹೆಚ್ಚು ಅವಕಾಶ, ಒತ್ತಡ ಸರ್ಕಾರ ಹಾಕಬೇಕು. ಉ ಕ ಜಿಲ್ಲೆ ಹಾಗೂ ಪಶ್ಚಿಮ ಘಟ್ಟ ಪರಿಸರ, ಜನಜೀವನ, ಅರಣ್ಯ ದೃಷ್ಟಿಯಿಂದ ಹೊಸ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು. ಮುಂದೆ ತಮ್ಮನ್ನು ಭೇಟಿಯಾಗಿ ಸಮಗ್ರ ಮಾಹಿತಿ ನೀಡಲು ಸಮಯ ಅವಕಾಶ ನೀಡುವಂತೆ ಶ್ರೀಗಳು ಪತ್ರದಲ್ಲಿ ಮನವಿ ಮಾಡಿದ್ದಾರೆ.