ಜೊಯಿಸ್ ವರದಿ ಯಥಾವತ್ ಜಾರಿಯಿಂದ ದೇಗುಲಗಳಿಗೆ ಅಪಾಯ ದೂರ : ಸ್ವರ್ಣವಲ್ಲಿ

ಜಿಲ್ಲಾ ಮಟ್ಟದ ದೇಗುಲಗಳ ಪ್ರಮುಖರ ಸಭೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : “ರಾಜ್ಯ ಸರ್ಕಾರವೇ ಜಸ್ಟೀಸ್ ರಾಮಾ ಜೋಯಿಸ್ ಸಮಿತಿ ಮಾಡಿ ವರದಿ ಸಿದ್ದಪಡಿಸಿದರೂ ಅದರ ಅನುಷ್ಠಾನ ಮಾಡಲೇ ಇಲ್ಲ. ದೇಗುಲಗಳ ಪರಿಸ್ಥಿತಿ, ವ್ಯವಸ್ಥೆಗಳು, ಆಗಬೇಕಾದ ನಿಯಮಗಳನ್ನು ಜೋಯಿಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಾಮಾ ಜೊಯಿಸ್ ವರದಿ ಯಥವತ್ತ ಜಾರಿಯಿಂದ ದೇಗುಲಗಳಿಗೆ ಅಪಾಯ ದೂರ ಆಗಲಿದೆ” ಎಂದು ಸ್ವರ್ಣವಲ್ಲೀ ಸ್ವಾಮೀಜಿ ಹೇಳಿದರು.

ಅವರು ಗುರುವಾರ ಮಾರಿಗುಡಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಎಲ್ಲ ದೇಗುಲಗಳ ಪ್ರಮುಖರ ಸಭೆಯಲ್ಲಿ ಮಾತನಾಡುತ್ತಾ, “ಸರ್ಕಾರವು ರಾಜ್ಯಮಟ್ಟದಲ್ಲಿ ಹಿಂದೂ ದೇಗುಲಗಳ ದೇಖರೇಖೆ ನೋಡಲು ಸ್ವಾಯತ್ತ ಮಂಡಳಿ ಮಾಡಬೇಕು. ಅದಕ್ಕೆ ನಿವೃತ್ತ ಜಸ್ಟೀಸ್ ಅಧ್ಯಕ್ಷರಾಗಬೇಕು. ಸಚಿವರು ಸದಸ್ಯರಾಗಬೇಕು. ಜಿಲ್ಲಾಮಟ್ಟದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ಇರಬೇಕು. ಜಿಲ್ಲಾದಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಬೇಕು. ಜಿಲ್ಲೆಯಲ್ಲಿ ಈಗ ಸರ್ಕಾರ ಮಾಡಿರುವ ಧಾರ್ಮಿಕ ಪರಿಷತ್ 9 ದೇಗುಲಗಳ ಆಡಳಿತ ಸಮಿತಿಗೆ ಮುಂದಾಗಿದೆ. ತಕ್ಷಣ ಸಮಿತಿ ಸದಸ್ಯರಿಗೆ ಮನವೊಲಿಸಿ, ಈ ಪ್ರಕ್ರಿಯೆ ನಿಲ್ಲಿಸಲು ಮನವಿ ಮಾಡಬೇಕು. ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ವಾರದೊಳಗೆ ಮುಜರಾಯಿ ಸಚಿವರು, ಇತರ ಪ್ರಮುಖರ ಭೇಟಿಯಾಗಿ ಸುಪ್ರಿಂ ಕೋರ್ಟು ಆದೇಶ ಬರುವತನಕ ದೇಗುಲ ವಶದಂತಹ ಪ್ರಕ್ರಿಯೆ ಹಾಗೂ ಹೊಸ ಸಮಿತಿ ನೇಮಕ ಪ್ರಕ್ರಿಯೆ ತಡೆಗೂ ಮನವಿ ಮಾಡಬೇಕು. ಮುಖ್ಯಮಂತ್ರಿಗಳಿಗೂ ಪತ್ರ ಚಳುವಳಿ ಮೂಲಕ ದೇಗುಲ ಸಮಿತಿಯವರು ಸಂದೇಶ ಕಳುಹಿಸಬೇಕು” ಎಂದರು.

ಹೈಕೋರ್ಟು ನ್ಯಾಯವಾದಿ ಅರುಣಾಚಲ ಹೆಗಡೆ ಮಾತನಾಡಿ, “ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ನಮ್ಮ ಸಮಿತಿಯು 2 ಸಲ ಜಯ ಸಾಧಿಸಿದೆ. ಸುಪ್ರಿಂ ಕೋರ್ಟಿಗೆ ರಾಜ್ಯ ಸರ್ಕಾರ ಹೋಗಿ ತಡೆಯಾಜ್ಞೆ ತಂದು ಧಾರ್ಮಿಕ ಪರಿಷತ್ ಮಾಡಿ ಎಲ್ಲ ದೇಗುಲಗಳ ಆಡಳಿತ ಸಮಿತಿ ವಶಕ್ಕೆ ತೆಗೆದುಕೊಳ್ಳುವ ರೀತಿ ಕಾನೂನು ಪ್ರಕ್ರಿಯೆ  ಖಂಡನೀಯವಾಗಿದೆ. ನಮ್ಮ ಕಾನೂನು ಸಮರ ಮುಂದುವರಿಯುತ್ತದೆ. ಸುಪ್ರಿಂ ಕೋರ್ಟಿನಲ್ಲಿ ನಮ್ಮ ಪರ ಆಗುತ್ತದೆಯೆಂಬ ವಿಶ್ವಾಸವಿದೆ. ಜಿಲ್ಲಾ ಧಾರ್ಮಿಕ ಸಮಿತಿ ಸದಸ್ಯರಿಗೆ ದೇಗುಲಗಳ ಸರ್ಕಾರಿಕರಣ ಆಗದಂತೆ ತಡೆಯಲು ಸುಪ್ರಿಂ ಕೋರ್ಟು ತೀರ್ಪು ಬರುವ ತನಕ ಹೊಸ ಸಮಿತಿ ಮಾಡಬಾರದೆಂದು ಮನವಿ ಮಾಡಬೇಕಿದೆ. ಸರ್ಕಾರಗಳು, ಮಂತ್ರಿಗಳು ಜನರ ಆಶೋತ್ತರಗಳಿಗೆ ಅನುಗುಣವಾಗಿ ಕಾಯಿದೆ ಮಾಡಬೇಕು. ಪ್ರತಿಷ್ಠೆಗೆ ಕಾನೂನು ಸಮರಕ್ಕೆ ಇಳಿಯುವದು ಸರಿಯಲ್ಲ. ಉತ್ತರ ಕರ್ನಾಟಕ ದೇಗುಲಗಳು ಸ್ವತಂತ್ರ, ಸಂಪ್ರದಾಯದ ಅನುಗುಣವಾಗಿ ಆಡಳಿತ ಸಮಿತಿ ಹೊಂದಿ ವ್ಯವಸ್ಥಿತವಾಗಿ ನ್ಯಾಯಾಧೀಶರಿಂದ ಆಯ್ಕೆಯಾಗಿ ನಡೆಯುತ್ತಿದೆ. ಇಂತಹ ವ್ಯವಸ್ಥೆಗೆ ಸರ್ಕಾರ ಹಸ್ತಕ್ಷೇಪ ಬೇಡ” ಎಂದರು.

ಮಾಜಿ ಶಾಸಕ ಜೆ ಡಿ ನಾಯ್ಕ ಮಾತನಾಡಿ, “ಸುಪ್ರಿಂ ಕೋರ್ಟಿನಲ್ಲಿ ವಿಚಾರಣೆ ನಡೆಯುವಾಗ ರಾಜ್ಯ ಸರ್ಕಾರ ದುಡುಕಿನ ಕ್ರಮಕ್ಕೆ ಹೋಗಬಾರದು. ದೇಗುಲಗಳ ಸ್ವಾಯತ್ತತೆಗೆ ಧಕ್ಕೆ ತರಬಾರದು. ಎಲ್ಲರೂ ಸೇರಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ಮಾಡೋಣ” ಎಂದರು.