ಸ್ವಾಮಿ ಮರ್ಮಾಂಗ ಕಟ್ ಪ್ರಕರಣ : ಸಂತ್ರಸ್ತೆಗೆ ಪರಿವಾರದಿಂದ ಒತ್ತಡ ?

ತಿರುವನಂತಪುರಂ : ಕೇರಳದ ಶ್ರೀಹರಿ ಆಲಿಯಾಸ್ ಗಣೇಶಾನಂದ ತೀರ್ಥಪಾದ ಎಂಬ ಸ್ವಘೋಷಿತ ದೇವಮಾನವನ ಮಮಾರ್ಂಗ ತುಂಡರಿಸಿದ ಪ್ರಕರಣ ಇನ್ನೊಂದು ಕುತೂಹಲಕಾರಿ ತಿರುವು ಪಡೆದಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಯುವತಿಯ ಪ್ರಿಯಕರ ಎಂದು ತಿಳಿಯಲಾದ ಕೊಲ್ಲಂ ಜಿಲ್ಲೆಯ ಕೊಟ್ಟರಕ್ಕರ ಎಂಬಲ್ಲಿನ 35 ವರ್ಷದ ಅಯ್ಯಪ್ಪದಾಸ್ ಎಂಬಾತ ಕೇರಳ ಹೈಕೋರ್ಟಿನಲ್ಲಿ ಸೋಮವಾರ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ  ಯುವತಿಯನ್ನು `ಬಲವಂತದ ದಿಗ್ಬಂಧನ’ದಿಂದ ಬಿಡುಗಡೆ ಮಾಡುವಂತೆ ಕೋರಿದ್ದಾನೆ. ಯುವತಿಯನ್ನು ಕೆಲ ಸಂಘ ಪರಿವಾರದ ಕಾರ್ಯಕರ್ತರು ಸ್ವಾಮಿಯ ವಕೀಲ ಅಜಿತ್ ಎಂಬಾತನ ಸಹಾಯದಿಂದ ನೆಡುಮಂಗಡ್ ಎಂಬಲ್ಲಿನ ಮನೆಯಲ್ಲಿ ದಿಗ್ಭಂಧನದಲ್ಲಿರಿಸಿ ಸ್ವಾಮಿ ತನ್ನ ಮೇಲೆ ಅತ್ಯಚಾರ ನಡೆಸಿಲ್ಲ ಎಂಬ ಹೇಳಿಕೆ ನೀಡುವಂತೆ ಮಾಡಿದ್ದಾರೆಂದು ಆತ ಆರೋಪಿಸಿದ್ದಾನೆ.

ತನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದಾಗ ತಾನು ಆತನ ಮರ್ಮಾಂಗ ತಂಡರಿಸಿದೆ ಎಂದು ಯುವತಿ ಮೊದಲು ಹೇಳಿಕೆ ನೀಡಿದ್ದರೆ, ನಂತರ ತನ್ನ  ಹೇಳಿಕೆ ಬದಲಾಯಿಸಿ ಸ್ವಾಮಿ ತನ್ನನ್ನು ಲೈಂಗಿಕವಾಗಿ ಶೋಷಿಸಿಲ್ಲ ಹಾಗೂ ತಾನು  ಸ್ವಾಮಿಯ ಶಿಷ್ಯ ಶ್ರೀಹರಿ ಎಂಬಾತನ ಒತ್ತಾಯದ ಮೇರೆಗೆ ಹಾಗೆ ಮಾಡಿದ್ದಾಗಿ ಹೇಳಿದ್ದಳು.