ಸ್ವಚ್ಛ ಮಂಗಳೂರು ಅಭಿಯಾನದಡಿ ನಗರದ ವಿವಿಧ ಭಾಗಗಳು ಕ್ಲೀನ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ವಚ್ಛ ಮಂಗಳೂರು ಅಭಿಯಾನದಡಿ ಭಾನುವಾರ ಕಲಾವಿದ ದಿನೇಶ್ ಹೊಳ್ಳ ಮತ್ತು ಅವರ ತಂಡ ಕಂಪೌಂಡು ಗೋಡೆಯ ಮೇಲೆ ಚಿತ್ರಗಳನ್ನು ಬಿಡಿಸಿದರು. ಇದೇ ವೇಳೆ ಉಳಿದ ಸದಸ್ಯರು ಜೈಲು ರೋಡು ಸುತ್ತಮುತ್ತ ಪ್ರದೇಶಗಳನ್ನು ಸುಂದರಗೊಳಿಸಿದರು. ಕೆಲವು ಮಂದಿ ಸರ್ಕಾರಿ ಲೇಡಿಘೋಷನ್ ಆಸ್ಪತ್ರೆಯ ಆವರಣವನ್ನು ಶುಚಿಗೊಳಿಸಿದರು.

ಶ್ರೀ ರಾಮಕೃಷ್ಣ ಮಿಷನ್ 12ನೇ ವಾರದ ಸ್ವಚ್ಛ ಮಂಗಳೂರು ಅಭಿಯಾನದಡಿಯಲ್ಲಿ ಭಾನುವಾರ ನಗರದ ಏಳು ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.

ಕಾರ್ಯಕ್ರಮದಡಿಯಲ್ಲಿ ಸುಬ್ರಹ್ಮಣ್ಯ ಸಭಾದ ಮುಂಭಾಗದಲ್ಲಿರುವ ಜೈಲು ರೋಡು ಮತ್ತು ಸಭಾದ ಎದುರುಗಡೆಯ ಕಂಪೌಂಡು ಗೋಡೆಯನ್ನು ಸ್ವಚ್ಛಗೊಳಿಸಿ ಸ್ವಚ್ಛ ಭಾರತ ಸಂದೇಶಗಳನ್ನೊಳಗೊಂಡ ಚಿತ್ರಗಳೊಂದಿಗೆ ಅಲಂಕರಿಸಲಾಯಿತು.

ಗಜೇಂದ್ರ ಮತ್ತು ಅವರ ತಂಡದಿಂದ ಹಲವಾರು ಭಿತ್ತಿಚಿತ್ರಗಳಿಂದ ತುಂಬಿಹೋಗಿದ್ದ ಬಸ್ ನಿಲ್ದಾಣಗಳ ಗೋಡೆಗಳು ಸ್ವಚ್ಛಗೊಂಡು ಪೈಂಟ್ ಬಳಿಯಲ್ಪಟ್ಟಿತು. ಕಳೆದ ವಾರದಂತೆ ಗಣಪತಿ ಇಂಗ್ಲಿಷ್ ಮಾದ್ಯಮ ಹೈಸ್ಕೂಲಿನ ವಿದ್ಯಾರ್ಥಿಗಳು ಜಿ ಎಚ್ ಎಸ್ ರಸ್ತೆ ಮತ್ತು ಶಾಲಾ ಆವರಣವನ್ನು ಶುಚಿಗೊಳಿಸಿದರು. ನಿತ್ಯಾನಂದ ಬಳಗ ಸದಸ್ಯರು ಗೂಡ್ಸ್ ಶೆಡ್ ನೀರೇಶ್ವಾಲ್ಯ ರಸ್ತೆಯನ್ನು ಸುಂದರಗೊಳಿಸಿದರು. ನಿವೇದಿತಾ ಬಳಗ ಮಂಗಳಾದೇವಿ ದೇವಸ್ಥಾನದಿಂದ ಕ್ಯಾಸಿಕಾ ಶಾಲೆವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು.

ಬಲ್ಮಠ ರಸ್ತೆಯನ್ನು ಡಾ ಶಿವರಾಮ ಕಾರಂತ ರಸ್ತೆ ಎಂದು ಹೆಸರಿಸಲಾಗಿದ್ದರೂ ಹೆಚ್ಚಿನವರಿಗೆ ಈ ರಸ್ತೆಯ ಬೋರ್ಡು ಕಾಣಿಸುತ್ತಲೇ ಇರಲಿಲ್ಲ. ಸಿಲ್ವೆರ್ ಸ್ಟ್ರೆಕ್ ತಂಡದ ಸ್ವಯಂ ಸೇವಕರು ಈ ಬೋರ್ಡನ್ನು ಸುಂದರಗೊಳಿಸಿ ಹೊಸದಾಗಿ ಬಣ್ಣ ಬಳಿದರು.

ಕಲ್ಲಡ್ಕದಲ್ಲಿ ಶ್ರೀ ರಾಮ ವಿದ್ಯಾ ಕೇಂದ್ರ ಮತ್ತು ಸ್ವಚ್ಛ ಭಾರತ ನಿರ್ಮಾಣ ಸಂಘದ ಸದಸ್ಯರು ಇಡೀ ಗ್ರಾಮವನ್ನು ಸ್ವಚ್ಛಗೊಳಿಸಿದರು.