ಕೆಲಸ ಕಳೆದುಕೊಂಡು ಬೀದಿಪಾಲಾದ ಸುಜ್ಲಾನ್ ಕಾರ್ಮಿಕರು

ಸಾಂದರ್ಭಿಕ ಚಿತ್ರ

ಭರವಸೆ ನೀಡಿ ಮರೆಯಾದ ವಿವಿಧ ಪಕ್ಷಗಳ ನಾಯಕರು, ಸಂಘಟನಾ ಮುಖಂಡರು ನಾಪತ್ತೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಸುಜ್ಲಾನ್ ಗುತ್ತಿಗೆ ಕಂಪನಿಯ ದುರಾಡಳಿತದ ಫಲವಾಗಿ ಕಳೆದ ಐದು ತಿಂಗಳ ಹಿಂದೆ ಕೆಲಸ ಕಳೆದುಕೊಂಡಿರುವ ಕಾರ್ಮಿಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದು, ಆ ದಿನದಲ್ಲಿ ಕಂಪನಿಯೊಂದಿಗೆ ಮಾತುಕತೆ ನಡೆಸಿ ನಮಗೆ ಮತ್ತೆ ಕೆಲಸ ದೊರಕಿಸಿಕೊಡುವ ಭರವಸೆ ನೀಡಿದ ರಾಜಕೀಯ ಮುಖಂಡರಾಗಲೀ, ಸಂಘಟನೆಯ ಪ್ರಮುಖರಾಗಲೀ ನಮ್ಮ ನೆರವಿಗೆ ಬಾರದೆ ನಮ್ಮನ್ನು ವಂಚಿಸಿದ್ದಾರೆ ಎಂಬುದಾಗಿ ಕೆಲಸ ಕಳೆದುಕೊಂಡ ಮಹಿಳಾ ಕಾರ್ಮಿಕರು ದೂರಿದ್ದಾರೆ.

ಕಳೆದ ಎಪ್ರಿಲ್ ತಿಂಗಳ 12ರಂದು ಕಾರ್ಮಿಕರು ಕೆಲಸಕ್ಕೆ ಕಂಪನಿಯೊಳಗೆ ಹೋಗುತ್ತಿದ್ದಂತೆ, ಗುತ್ತಿಗೆ ಕಂಪನಿಯ ಅಧಿಕಾರಿಗಳು ಏಕಾಏಕಿ ಯಾವುದೇ ಸೂಚನೆ ನೀಡದೆ ಸುಮಾರು 700 ಮಂದಿ ಕಾರ್ಮಿಕರನ್ನು “ನಿಮಗೆ ಕೆಲಸವಿಲ್ಲ, ನೀವು ತೆರಳಿ” ಎಂದಾಗ ಕಂಗಾಲಾದ ಕಾರ್ಮಿಕರು ಅನಿವಾರ್ಯ ಸ್ಥಿತಿಯಲ್ಲಿ ಪ್ರತಿಭಟನೆಯ ಹಾದಿ ತುಳಿದಿದ್ದರು. ಈ ಸಂದರ್ಭ ಪ್ರಥಮವಾಗಿ ಈ ಕಾರ್ಮಿಕರ ಬೆಂಬಲಕ್ಕೆ ನಿಂತವರು ಕಾರ್ಮಿಕ ಸಂಘದ ಅಧ್ಯಕ್ಷ ರವಿ ಶೆಟ್ಟಿ, ಆ ಬಳಿಕ ಸ್ಥಳಕ್ಕೆ ಆಗಮಿಸಿದ ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು ಸಹಿತ ಕಾಪು ಶಾಸಕ ವಿನಯಕುಮಾರ್ ಸೊರಕೆ ಪ್ರತಿಭಟನಾ ಸಭೆಯಲ್ಲಿ ಕಂಪನಿಯ ವಿರುದ್ಧ ಗುಡುಗಿದ ಇವರು ಕಾರ್ಮಿಕರಿಗೆ ನ್ಯಾಯದೊರಕಿಸಿಕೊಡುವ ಭರವಸೆಯನ್ನೂ ನೀಡಿದರು. ಶಾಸಕರ ಒತ್ತಡಕ್ಕೆ ಮಣಿದ ತಹಶೀಲ್ದಾರ್ ಸಹಿತ ವಿವಿಧ ಸರ್ಕಾರಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶಾಶಕರ ಉಪಸ್ಥಿತಿಯಲ್ಲೇ ಕಂಪನಿಯೊಳಗೆ ತುರ್ತು ಸಭೆ ನಡೆಸಿ ಚರ್ಚಿಸಲಾಯಿತು. ಆ ವೇಳೆ ಕೆಲಸದಿಂದ ಕಿತ್ತು ಹಾಕಿದ ಗುತ್ತಿಗೆ ಕಂಪನಿಯ ಮುಖ್ಯಸ್ಥರು, ಮುಂದಿನ ಎರಡು ತಿಂಗಳ ಬಳಿಕ ಎಲ್ಲರನ್ನೂ ಕೆಲಸಕ್ಕೆ ಮರು ನೇಮಿಸುವ ಭರವಸೆ ವ್ಯಕ್ತ ಪಡಿಸಿದರು. ಸಭೆಯ ನಿರ್ಣಯದಂತೆ ಕೆಲಸವಿಲ್ಲದ ಎರಡು ತಿಂಗಳ ಅರ್ಧ ಸಂಬಳ ಕಾರ್ಮಿಕರಿಗೆ ನೀಡುವಂತೆ ಸೂಚಿಸಿದ ಮೇರೆಗೆ ಅದಕ್ಕೂ ಒಪ್ಪಿಗೆ ನೀಡಿದ್ದರು ಕಂಪನಿ ಪ್ರಮುಖರು. ರಾಜಕೀಯ ನಾಯಕರು ಹಾಗೂ ಸಂಘಟನಾ ಪ್ರಮುಖರ ಭರವಸೆಯ ಮಾತುಗಳನ್ನು ನಂಬಿ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟರು.

ಅಂದಿನ ಸಭೆಯ ನಿರ್ಣಯದಂತೆ ಕಾರ್ಮಿಕರಿಗೆ ಅರ್ಧ ಸಂಬಳ ಕಂಪನಿಯ ನೀತಿ ನಿಯಮಗಳ ಪ್ರಕಾರ ಅಷ್ಟೋ ಇಷ್ಟೋ ಕಳೆದು ಕಾರ್ಮಿಕರ ಬ್ಯಾಂಕ್ ಖಾತೆ ಸೇರಿದೆ. ಆದರೆ ತಿಂಗಳು ಎರಡು ಕಳೆದರೂ ಕೆಲಸಕ್ಕೆ ಮರುನೇಮಕಗೊಳಿಸಿಲ್ಲ. ಆದರೆ ಹೋರಾಟದ ಮುಂಚೂಣಿಯಲ್ಲಿದ್ದ ಇನ್ನೂರು ಮಂದಿ ಯುವಕರನ್ನು ಕೆಲಸಕ್ಕಾಗಿ ಒಳ ಸೇರಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ಕಂಪನಿ ಬಹಳ ನಾಜೂಕ್ಕಾಗಿ ನಿಭಾಯಿಸಿದೆ. ಆದರೆ ನಮಗೆ ಭರವಸೆ ನೀಡಿದ ರಾಜಕೀಯ ನಾಯಕರ ಬಳಿಗೆ ಅಲೆದಾಟ ನಡೆಸಿದ ಮಹಿಳಾ ಕಾರ್ಮಿಕರಿಗೆ ಅಂತಿಮವಾಗಿ ದೊರೆತ ಫಲಿತಾಂಶ ಶೂನ್ಯ.