ಸುಜ್ಲಾನ್ ಕಂಪನಿ ಒಪ್ಪಂದಕ್ಕೆ ಕಾರ್ಮಿಕರ ಅಂತಿಮ ಸಹಿ

3 ದಿನದೊಳಗೆ ಕಂಪನಿ ಪುನರಾರಂಭ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕುಂಟುತ್ತಾ ಸಾಗುತ್ತಿದ್ದ ಸುಜ್ಲಾನ್ ಲಾಕೌಟ್ ತೆರವು ಪ್ರಕರಣ, ಕಾರ್ಮಿಕರು ಕಂಪನಿಯ ಕಠಿಣ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಕಂಪನಿ ಪುನರಾರಂಭಕ್ಕೆ ಮೂಹೂರ್ತ ಪಿಕ್ಸ್ ಮಾಡಲಾಗಿದ್ದು, ಮುಂದಿನ ಮೂರು ದಿನದೊಳಗೆ ಮತ್ತೆ ಕೆಲಸ ಆರಂಭಗೊಳ್ಳಲಿದೆ.

“ವರ್ಷಗಳ ಕಾಲ ಸಂಬಳದಲ್ಲಿ ಹೆಚ್ಚಳವಿಲ್ಲ, ನಿಗದಿತ ಸಮಯದಲ್ಲಿ ಬ್ಲೇಡ್ ನಿರ್ಮಾಣ ಮಾಡದಿದ್ದಲ್ಲಿ ಕಾರ್ಮಿಕರ ವಿರುದ್ಧ ಕ್ರಮ, ಕಂಪನಿ ಆರ್ಥಿಕ ನಷ್ಟ ಹೊಂದಿದ್ದಲ್ಲಿ ಕಾರ್ಮಿಕರ ವಿರುದ್ಧ ಕಾನೂನು ಕ್ರಮ, ಯಾವುದೇ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಕಂಪನಿಯ ವಿರುದ್ಧ ದೂರಿದ್ದಲ್ಲಿ ಅಂಥವರ ವಿರುದ್ಧ ಕ್ರಮ ಮುಂತಾದ ಜಟಿಲ ಸಮಸ್ಯೆಗಳ ಒಪ್ಪಂದಕ್ಕೆ 269 ಮಂದಿ ಸಹಿ ಹಾಕಿದ್ದು, ಹೊರ ರಾಜ್ಯಗಳ ಕಾರ್ಮಿಕರು ಇಷ್ಟರಲ್ಲೆ ಊರಿಗೆ ತೆರಳಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಬರುವವರು ಒಪ್ಪಂದಕ್ಕೆ ಸಹಿ ಹಾಕಬೇಕಾಗಿದೆ. ಒಟ್ಟು 330 ಮಂದಿ ಕಾರ್ಮಿಕರು ಕಂಪನಿಗೆ ಮರು ನೇಮಕಗೊಂಡಂತಾಗಿದ್ದು, ಮುಂದಿನ ಮೂರು ದಿನದೊಳಗೆ ಕಂಪನಿ ಕೆಲಸ ಆರಂಭಗೊಳಿಸಲಿದ್ದು, ಲಾಕೌಟ್ ಆದ ದಿನಗಳಿಂದಲೇ ಕಾರ್ಮಿಕರಿಗೆ ವೇತನ ನೀಡಲಾಗುವುದು ಎಂಬುದಾಗಿ ಕಂಪನಿ ಮುಖ್ಯಸ್ಥರು ತಿಳಿಸಿದ್ದಾರೆ” ಎಂದು ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.

ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ ನವೀನಚಂದ್ರ ಶೆಟ್ಟಿ ಮಾತನಾಡಿ, “ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಕಂಪನಿ ಈಡೇರಿಸಿದೆ. ಅಂತೆಯೆ ಕಂಪನಿಯು ಕೆಲ ನಿಯಮ ನಿಬಂಧನೆಗಳನ್ನು ವಿಧಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಮುಂದಿನ ದಿನದಲ್ಲಿ ಎಲ್ಲಾವೂ ಸರಿಯಾಗಲಿದೆ” ಎಂದರು.