ಸುಜ್ಲಾನ್ ಕಂಪನಿಗೆ ಬೀಗಮುದ್ರೆ

ರಾತ್ರಿಯೂ ಮುಂದುವರಿದ ಕಾರ್ಮಿಕರ ಪ್ರತಿಭಟನೆ

ನ 8ರಂದು ಕರಾವಳಿ ಅಲೆ ಈ

ಬಗ್ಗೆ ಕಾರ್ಮಿಕರನ್ನು ಎಚ್ಚರಿಸಿತ್ತು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ರಾತೋರಾತ್ರಿ ನ್ಯಾಯಾಲಯದ ಆದೇಶ ಪ್ರತಿಯನ್ನು ಕಂಪನಿಯ ಗೇಟಿಗೆ ಅಂಟಿಸಿ, ಕಂಪನಿಗೆ ಬೀಗ ಜಡಿದು ಸುಮಾರು ಆರುನೂರು ಕುಟುಂಬಗಳನ್ನು ಬೀದಿಗೆ ತಳ್ಳುವ ಮೂಲಕ ಕೆಲ ದಿನಗಳ ಹಿಂದೆ `ಕರಾವಳಿ ಅಲೆ’ ಪ್ರಕಟಿಸಿದ `ಮುಚ್ಚುವ ಭೀತಿಯಲ್ಲಿ ಸುಜ್ಲಾನ್’ ಈ ವರದಿ ನಿಜವಾಗಿದ್ದು, ತಡರಾತ್ರಿಯವರೆಗೂ ಕಾರ್ಮಿಕರ ಪ್ರತಿಭಟನೆ ಮುಂದುವರಿದಿದೆ.

ಮಂಗಳವಾರ ಸುಮಾರು 3 ಗಂಟೆಗೆ ಕಂಪನಿಯ ದ್ವಾರದಲ್ಲಿ ನೋಟಿಸೊಂದನ್ನು ಹಚ್ಚಿದ್ದು, ಕಂಪನಿ ಮುಚ್ಚಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆ ಸೆ 22ರ ಪ್ರಕಾರ ಲಾಕೌಟ್ ಘೋಷಿಸಲು ಕಂಪನಿಯು ತೀರ್ಮಾನಿಸಿರುವುದಾಗಿ ತಿಳಿಸಿದೆ. ತಾನು ಲಾಕೌಟ್ ಘೋಷಿಸಲು ನೌಕರರ ದುರ್ವತನೆ ಮತ್ತು ವಿದ್ವಂಸಕ ಕೃತ್ಯಗಳೇ ಕಾರಣ. ತನಗೆ ರೂ 1 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಹೇಳಿದೆ. ಇದರಿಂದ 326 ಕಂಪನಿ ಕಾರ್ಮಿಕರು ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿ 600ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ.

“ಸೋಮವಾರ ರಾತ್ರಿಪಾಳಿ ಕರ್ತವ್ಯಕ್ಕೆ ಹಾಜರಾದ ಕಾರ್ಮಿಕರನ್ನು ವಿದ್ಯುತ್ ಸಮಸ್ಯೆ ಮುಂದಿರಿಸಿ ವಾಪಾಸು ಕಳುಹಿಸಲಾಗಿದ್ದು, ಮಂಗಳವಾರದಿಂದ ಯಥಾಸ್ಥಿತಿ ಮುಂದುವರಿಯುವುದು ಎಂಬುದಾಗಿ ಹೇಳಿದ್ದರೂ ಮುಂಜಾನೆ ಕರ್ತವ್ಯಕ್ಕೆ ಬಂದು ಪಡುಬಿದ್ರಿಯ ಮುಖ್ಯ ಬಸ್ ತಂಗುದಾಣ ಬಳಿ ನಾವು ಬಸ್ಸಿಗಾಗಿ ಕಾಯುತ್ತಿದ್ದರೂ ಕಂಪನಿ ಬಸ್ ಬಾರದಿದ್ದರಿಂದ ಕಂಪನಿಯ ದೂರವಾಣಿ ಸಂಖ್ಯೆ ಸಹಿತ ಮುಖ್ಯ ಅಧಿಕಾರಿಗಳ

ಮೊಬೈಲಿಗೆ ಕಾರ್ಮಿಕರು ಕರೆ ಮಾಡಿದಾಗ ಮೊಬೈಲ್ ನಾಟ್ ರೀಚೇಬಲ್. ಸಂಶಯ ಬಂದು ಕಂಪನಿ ಕಡೆಗೆ ಬಂದಾಗ ಕಂಪನಿ ಮುಖ್ಯಸ್ಥರು ಕಾರ್ಮಿಕರಾದ ನಮ್ಮನ್ನು ವಂಚಿಸಿದ ವಿಚಾರ ಬೆಳಕಿಗೆ ಬಂದಿದೆ” ಎನ್ನುತ್ತಾರೆ ಕಂಪನಿಯ ಮುಂದೆ ಪ್ರತಿಭಟಿಸುತ್ತಿದ್ದ ಕಾರ್ಮಿಕರು.

ಹೊರ ರಾಜ್ಯದ ಕಾರ್ಮಿಕ ಚೇತನ್ ಎಂಬವರು ಮಾತನಾಡಿ, “ನಾವು ಕಂಪನಿಯನ್ನು ನಂಬಿ ನಮ್ಮ ಕುಟುಂಬ ಸಹಿತ ನಾವು ಇಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಇದೀಗ ಏಕಾಏಕಿ ಕಂಪನಿ ಮುಚ್ಚಿದ್ದರಿಂದ ನಾವು ನಮ್ಮ ಕುಟುಂಬ ಸಹಿತ ಬೀದಿಗೆ ಬೀಳುವಂತಾಗಿದ್ದು, ಯಾವುದೇ ಕಾರಣಕ್ಕೆ ಕಂಪನಿ ನಮಗೆ ನೀಡಬೇಕಾಗಿದ್ದ ಮೊತ್ತ ನೀಡದ ಹೊರತು ಕಂಪನಿ ಗೇಟ್ ಬಳಿಯಿಂದ ತೆರಳುವ ಪ್ರಶ್ನೆಯೇ ಇಲ್ಲ. ಕಂಪನಿಯ ಮುಖ್ಯಸ್ಥರಾದ ಫಿಲಿಫ್ ಹಾಗೂ ದಕ್ಷಿಣಮೂರ್ತಿ ಕಾರ್ಮಿಕರಿಂದ ನಮ್ಮ ಕಂಪನಿ ನಷ್ಟವಾಗಿದೆ ಎಂಬ ಕಾರಣ ಕೊಡುತ್ತಿದ್ದು, ನಮ್ಮಿಂದ ನಷ್ಟ ಆಗಿದ್ದು ಹೌದಾಗಿದ್ದರೆ ಕಂಪನಿ ನಮಗೆ ನೋಟಿಸು ನೀಡಿಲ್ಲ ಏಕೆ ? ಕೇವಲ ಕಾರ್ಮಿಕರನ್ನು ವಂಚಿಸಲು ಕಂಪನಿ ನಾಟಕವಾಡುತ್ತಿದೆ” ಎಂದಿದ್ದಾರೆ. ಬಿಜೆಪಿ ಮುಖಂಡ ಸುರೇಶ್ ಶೆಟ್ಟಿ ಗುರ್ಮೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಮಾತನಾಡಿ, “ಕೆಲವೇ ಎಕ್ರೆ ಪ್ರದೇಶ ಅಗತ್ಯವಿದ್ದ ಕಂಪನಿ ಜನರಿಂದ ಜುಜುಬಿ ಹಣ ನೀಡಿ ಸಾವಿರಾರು ಎಕ್ರೆ ಪ್ರದೇಶ ವಶಪಡಿಸಿಕೊಂಡು ಇದೀಗ ಸೆಂಟ್ಸಿಗೆ ಲಕ್ಷಾಂತರ ರೂಪಾಯಿ ಮೌಲ್ಯ ಹೇಳಿ ಮಾರಾಟ ನಡೆಸುವ ಮೂಲಕ ಜಾಗದ ವ್ಯಾಪಾರ ನಡೆಸುತ್ತಿದೆ. ಮಾತೆತ್ತಿದೆರೆ ಕಾನೂನು ಕಾನೂನು ಎನ್ನುವ ಕಂಪನಿ ಮುಖ್ಯಸ್ಥರು, ಅಪಾಯಕಾರಿ ರಾಸಾಯನಿಕ ಬಳಸಿ ನಿರ್ಮಿಸಿದ ರೆಕ್ಕೆಗಳನ್ನು ಕಾನೂನುಬಾಹಿರವಾಗಿ ಎಲ್ಲೇಲ್ಲೋ ದಾಸ್ತಾನು ಮಾಡಿದ್ದು, ಯಾವುದೇ ಕಾರಣದಿಂದ ಬೆಂಕಿ ಹತ್ತಿಕೊಂಡರೆ ಊರಿಗೆ ಊರೇ ಹೊತ್ತಿ ಉರಿಯುವ ಸಾಧ್ಯತೆ ಇದೆ. ವಿಶೇಷ ಆರ್ಥಿಕ ವಲಯ ಆಗಿರುವುದರಿಂದ ವಿಶೇಷ ಕಾರ್ಮಿಕ ಕಾನೂನುಗಳಿವೆ, ಅದನ್ನು ಗಾಳಿಗೆ ತೂರಿ ಕಾನೂನುಬಾಹಿರವಾಗಿ ಕಂಪನಿ ಮುಚ್ಚಿದ್ದು ಸರಿಯಲ್ಲ. ಅದರದ್ದೇ ಆದ ಅಧಿಕಾರಿ ಕೊಚ್ಚಿನ್ನಿನಲ್ಲಿದ್ದು, ಅವರು ಕೇವಲ ಅಧಿಕಾರಿಗಳು ನೀಡಿದ ವರದಿಯನ್ನು ಆಧರಿಸಿ ಕಂಪನಿ ಮುಚ್ಚಲು ಆದೇಶ ನೀಡಿದ್ದು ಸರಿಯಲ್ಲ. ಈ ಬಗ್ಗೆ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡುವುದಕ್ಕೆ ಅವರೊಂದಿಗೆ ಸೇರಿ ಪ್ರತಿಭಟಿಸುತ್ತೇವೆ” ಎಂದು ತಿಳಿಸಿದ್ದಾರೆ.