ಸುಜ್ಲಾನ್ 330 ಮಂದಿಗೆ ಜಯ, 700 ಕಾರ್ಮಿಕರಿಗೆ ಸೋಲು

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಸುಜ್ಲಾನ್ ಕಂಪನಿ ಲಾಕೌಟ್ ಸಂದರ್ಭ 330 ಮಂದಿ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದು, ಬಳಿಕ ನಡೆದ ಹೋರಾಟದ ಫಲವಾಗಿ ಮರಳಿ ಕೆಲಸ ಪಡೆದಿರುವುದು ಹೋರಾಟಕ್ಕೆ ಸಂದ ಫಲ ಎನ್ನುವ ನಾಯಕರು, ಕೆಲವು ತಿಂಗಳ ಹಿಂದೆ ಇದೇ ಕಂಪನಿ ಏಕಾಏಕಿ 700 ಮಂದಿಯನ್ನು ಬೀದಿಗೆ ತಳ್ಳಿದ ಬಗ್ಗೆ ಎಲ್ಲೂ ಮಾತ್ತೆತ್ತುತ್ತಿಲ್ಲವೇಕೆ ಎನ್ನುವ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.

ಯಾವುದೇ ಸೂಚನೆ ನೀಡದೆ ದಿಢೀರ್ 700 ಕಾರ್ಮಿಕರಿಗೆ ಗೇಟ್ಪಾಸ್ ನೀಡಿದ ಸುಜ್ಲಾನ್ ಗುತ್ತಿಗೆ ಕಂಪನಿಯ ವಿರುದ್ಧ ಪ್ರತಿಭಟನೆಗಳು ನಡೆದು ಶಾಸಕ ಸಹಿತ ತಹಶೀಲ್ದಾರ್ ಸಮಕ್ಷಮದಲ್ಲಿ ಎರಡೇ ತಿಂಗಳಲ್ಲಿ ಮರಳಿ ಕೆಲಸಕ್ಕೆ ಸೇರಿಸಿಕೊಳ್ಳುವ ಭರವಸೆ ನೀಡಿದ ಕಂಪನಿ ಮೌನ ವಹಿಸಿದರೆ, ಕಾರ್ಮಿಕರಿಗೆ ಭರವಸೆ ನೀಡಿದ ಸಂಘಟನೆಗಳಾಗಲೀ ರಾಜಕೀಯ ಧುರೀಣರಾಗಲೀ ಈ ಸೋಲಿನ ಬಗ್ಗೆ ಮಾತೆತ್ತುತ್ತಿಲ್ಲ. ಇದರ ಫಲವಾಗಿ ಕೆಲಸ ಕಳೆದುಕೊಂಡ ಕಾರ್ಮಿಕರು ಹೆಂಚಿನ ಕಾರ್ಖನೆಯಲ್ಲಿ, ಪೆಟ್ರೋಲ್ ಬಂಕುಗಳಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುತ್ತಿದ್ದು, ಇಂದಲ್ಲ ನಾಳೆ ನಾವು ಕಳೆದುಕೊಂಡ ಕೆಲಸ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

ರಾಜಕೀಯ ಮುಖಂಡರು ಸಹಿತ ಕಾರ್ಮಿಕ ಸಂಘಟನೆಗಳು ಹೋರಾಟಗಾರರ ಬೆಂಬಲಕ್ಕೆ ನಿಂತ ಫಲವಾಗಿ ಕಂಪನಿ ಮುಖ್ಯಸ್ಥರು, ಹೋರಾಟಗಾರ ಪ್ರಮುಖರನ್ನು ಸಹಿತ ರಾಜಕೀಯ ಮುಖಂಡರನ್ನು, ಮಾಧ್ಯಮಗಳನ್ನು ದೂರವಿಟ್ಟು ಮಾತುಕತೆಗೆ ಆಹ್ವಾನಿಸಿದ್ದರು. ಇದೀಗ ಮಾಧ್ಯಮಗಳ ಬೆಂಬಲದಿಂದ ಈ ಜಯ ದೊರಕಿದೆ ಎನ್ನುವ ನಾಯಕರಿಗೆ, ಆ ದಿನದಲ್ಲಿ ಮಾಧ್ಯಮಗಳನ್ನು ಕಂಪನಿ ಕಡೆಗಣಿಸಿದಾಗ ಮಾಧ್ಯಮಗಳ ಬೆಂಬಲಕ್ಕೆ ಯಾವುದೇ ವ್ಯಕ್ತಿ ಬಾರದಿರುವುದು ಆಶ್ಚರ್ಯ ತಂದಿದೆ. ಆದರೆ ಗುಪ್ತ ಮಾತುಕತೆ ನಡೆಸಿ ಮಾಡಿದ್ದಾದರೂ ಏನು ?