ವಿವಾಹಿತೆ ಸಂಶಯಾಸ್ಪದ ಸಾವು

ಕೊಲೆ ಶಂಕೆ, ಪತಿ ಮನೆಯವರು ತರಾಟೆಗೆ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಕೋಟೆಬಾಗಿಲಿನ ವಿವಾಹಿತೆ ಕಾಂತಾವರದ ತನ್ನ ಪತಿ ಮನೆಯ ಸಮೀಪ ಹಾಡಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿದ್ದು, ಈಕೆಯನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಏತನ್ಮಧ್ಯೆ ಮೃತಳ ಅಂತ್ಯಸಂಸ್ಕಾರಕ್ಕೆಂದು ಬುಧವಾರ ಸಂಜೆ ಆಕೆಯ ಹುಟ್ಟೂರು ಕೋಟೆಬಾಗಿಲಿಗೆ ಆಗಮಿಸಿದ್ದ ಪತಿ ಮನೆಯವರನ್ನು ಊರವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಶಯಾಸ್ಪದ ರೀತಿಯಲ್ಲಿ ಸಾವನಪ್ಪಿದ ಮಹಿಳೆ ಕೋಟೆಬಾಗಿಲಿನ ಸಂಜೀವ ಸುವರ್ಣ ಎಂಬವರ ಪುತ್ರಿ ಸುರೇಖಾ (27) ಎಂದು ತಿಳಿದುಬಂದಿದೆ.

ಐದು ವರ್ಷದ ಹಿಂದೆ ಈಕೆಯನ್ನು ಕಾಂತಾವರ ಪ್ರಕಾಶ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ 4 ವರ್ಷದ ಒಂದು ಗಂಡು ಮಗುವಿದೆ. ಮಂಗಳವಾರ ಮಧ್ಯಾಹ್ನ ಈಕೆ ಪತಿ ಮನೆಯ ಸಮೀಪದ ಹಾಡಿಯೊಂದರ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು ಇದನ್ನು ಗಮನಿಸಿದ ಪತಿ ಮನೆಯವರು ಈಕೆಯನ್ನು ಕೂಡಲೆ ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ಸುರೇಖಾ ಸಾವಿನ ಹಿಂದೆ ಪತಿ ಮನೆಯವರ ಹೆಸರು ಕೇಳಿಬರುತ್ತಿದೆ. ಸುರೇಖಾರ ಪತಿ ಪ್ರಕಾಶ್ ಮಂಗಳೂರಿನಲ್ಲಿ ರಿಕ್ಷಾ ಶೋರೂಂನಲ್ಲಿ ಉದ್ಯೋಗಿಯಾಗಿದ್ದು ಪತಿ-ಪತ್ನಿ ಸಂಬಂಧ ಅನೋನ್ಯವಾಗಿತ್ತೆನ್ನಲಾಗಿದೆ. ಆದರೆ ಹೆಣ್ಣಿಗೆ ಹೆಣ್ಣೆ ಶತ್ರು ಎಂಬಂತೆ ಸುರೇಖಾರ ಅತ್ತಿಗೆಯ ಉದ್ಧಟತನದ ನಡವಳಿಕೆ ಸುರೇಖಾಳ

ಬದುಕನ್ನೆ ಹಾಳು ಮಾಡಿತು ಎಂಬ ಆರೋಪ ಕೇಳಿಬಂದಿದೆ.

ಬೆದರಿಸುತ್ತಿದ್ದವ ಯಾರು ?

ಸೌಮ್ಯ ಸ್ವಭಾವದ ಸುರೇಖಾಳ ಬದುಕಿನಲ್ಲಿ ಆಟವಾಡಿ ಆಕೆಯ ಸಾವಿಗೆ ಪರೋಕ್ಷವಾಗಿ ಕಾರಣವಾದವರಲ್ಲಿ ಯುವಕನೊಬ್ಬನ ಹೆಸರು ಕೂಡ ಕೇಳಿಬರುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತನೆನ್ನಲಾದ ಈತ ಸುರೇಖಾಳ ಮೊಬೈಲಿಗೆ ಕರೆ ಮಾಡಿ ಬೆದರಿಸುತ್ತಿದ್ದ ಎನ್ನಲಾಗಿದ್ದು, ಇದಕ್ಕೆ ಕಾರಣ ಏನು, ಈತನಿಗೂ ಸುರೇಖಾಳ ಪತಿ ಮನೆಯವರಿಗೂ ಏನು ಸಂಬಂಧ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿದ್ದು ಇದರ ಬಗ್ಗೆ ಪೊಲೀಸರು ಕೂಲಂಕುಶ ತನಿಖೆ ನಡೆಸಿದರೆ ಸತ್ಯಾಂಶ ಹೊರಬೀಳಬಹುದು ಎನ್ನಲಾಗಿದೆ.

“ಸಹೋದರಿಯ ಸಾವು ಆತ್ಮಹತ್ಯೆ ಅಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡಸಿ ಸತ್ಯಾಂಶ ತಿಳಿಯಬೇಕು” ಎಂದು ಮೃತಳ  ಸಹೋದರ ಸುರೇಶ್ ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು ದೂರಿನಲ್ಲಿ ಪತಿ ಮನೆಯ ಕೆಲವರ ಹೆಸರು ಮತ್ತು ಯುವಕನ ಹೆಸರನ್ನು ಸೇರಿಸಿದ್ದಾರೆ ಎಂದು ತಿಳಿದುಬಂದಿದೆ.

 ಪತಿ ಮನೆಯವರು ತರಾಟೆಗೆ

ಸುರೇಖಾಳ ಶವವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಅಂತ್ಯಸಂಸ್ಕಾರಕ್ಕೆ ಬುಧವಾರ ಸಂಜೆ ಹುಟ್ಟೂರು ಕೋಟೆಬಾಗಿಲಿಗೆ ತರಲಾಗಿತ್ತು. ಈ ಸಂದರ್ಭ ನೂರಾರು ಮಂದಿ ಊರವರು ಸೇರಿದ್ದು ಸುರೇಖಾಳ ಸಾವು ಆತ್ಮಹತ್ಯೆ ಅಲ್ಲ, ಕೊಲೆ ಆಗಿರಬೇಕೆಂದು ಅನುಮಾನ ವ್ಯಕ್ತಪಡಿಸಿದರು. ಇದೇ ವೇಳೆ ಸುರೇಖಾಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಕೋಟೆಬಾಗಿಲಿನ ಆಕೆಯ ಮನೆಗೆ ಬಂದ ಪತಿ ಮನೆಯವರ ಮೇಲೆ ಹರಿಹಾಯ್ದ ಊರವರು ಅವರನ್ನು ತರಾಟೆಗೆ ತೆಗೆದುಕೊಂಡು ಆಕೆಯ ಸಾವಿಗೆ ನೀವೇ ಕಾರಣ ಎಂದು ಆರೋಪಿಸಿದರು.

ಸುರೇಖಾಳಿಗೆ ಮೊಬೈಲಿನಲ್ಲಿ ಬೆದರಿಸುತ್ತಿದ್ದ ಯುವಕ ಯಾರು, ಆತನನ್ನು ಕೂಡಲೇ ಪೊಲೀಸರಿಗೊಪ್ಪಿಸಿ ಎಂದು ಒತ್ತಡ ಹಾಕಿದರು. ಈ ದೃಶ್ಯಾವಳಿಗಳನ್ನು ಮೊಬೈಲಿನಲ್ಲಿ ಚಿತ್ರೀಕರಿಸುತ್ತಿದ್ದ ಸುರೇಖಾಳ ಪತಿ ಮನೆಯವರನ್ನೊಬ್ಬನಿಗೆ ಊರವರು ತಪರಾಕಿ ನೀಡಿದ ಘಟನೆಯೂ ನಡೆಯಿತು. ಸುರೇಖಾಳ ಪತಿ ಮನೆ ಆವಿಭಕ್ತ ಕುಟುಂಬದ್ದಾಗಿದೆ. ಸುರೇಖಾ ಪತಿ ಮನೆಯಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಳೆನ್ನಲಾಗಿದ್ದು ಇಂದಲ್ಲ ನಾಳೆ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿ ತನಗಾದ ನೋವನ್ನು ಆಕೆ ಯಾರಲ್ಲೂ ಹಂಚಿಕೊಂಡಿಲ್ಲ ಎನ್ನಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

LEAVE A REPLY