ಸುರತ್ಕಲ್ ಪೋಲೀಸರಿಂದ ಮೂಲ್ಕಿ ರಿಕ್ಷಾ ನಿಲ್ದಾಣ ತೆರವು

ಸಾರ್ವಜನಿಕರ ದೂರಿನ ಮೇರೆಗೆ ಕ್ರಮ

ಮುಲ್ಕಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಬಸ್ಸು ನಿಲ್ದಾಣ ಬಳಿಯ ಪೆಟ್ರೋಲು ಬಂಕಿನ ಎದುರುಗಡೆ ಇರುವ ಹೆದ್ದಾರಿ ಸರ್ವೀಸು ರಸ್ತೆಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಪಾರ್ಕಿಂಗ್ ಮಾಡುತ್ತಿದ್ದ ರಿಕ್ಷಾನಿಲ್ದಾಣವನ್ನು ಮಂಗಳವಾರ ಸ್ಥಳೀಯರ ದೂರಿನ ಮೇರೆಗೆ ಸುರತ್ಕಲ್ ಟ್ರಾಫಿಕ್ ಪೊಲೀಸರು  ತೆರವುಗೊಳಿಸಿದ್ದರಿಂದ ಗೊಂದಲಮಯ ವಾತಾವರಣ ಉಂಟಾಯಿತು.

ಮಂಗಳವಾರ ಬೆಳಗ್ಗೆ ಮೂಲ್ಕಿಯ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು ಸರ್ವೀಸು ರಸ್ತೆಯಲ್ಲಿ ಪಾರ್ಕ್ ಮಾಡುತ್ತಿದ್ದ ನಿಲ್ದಾಣವನ್ನು ಸಾರ್ವಜನಿಕರ ದೂರಿನ ಮೇರೆಗೆ ತೆರವುಗೊಳಿಸಿದ್ದಾರೆ. ಇದರಿಂದ ವಿಚಲಿತರಾದ ರಿಕ್ಷಾ ಚಾಲಕರು ಏನು ಮಾಡುವುದೆಂದು ಗೊತ್ತಾಗದೆ ಸ್ಥಳದಲ್ಲಿ ಗೊಂದಲಮಯ ವಾತಾವಣ ಸೃಷ್ಠಿಯಾಯಿತು. ಕೂಡಲೇ ರಿಕ್ಷಾ ಚಾಲಕರು ಆಕ್ರೋಶಗೊಂಡು ಮೂಲ್ಕಿ ನ ಪಂ ಅಧ್ಯಕ್ಷ ಸುಮಿಲ್ ಆಳ್ವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದರು. ರಿಕ್ಷಾ ಚಾಲಕರು ಗೊಂದಲದಲ್ಲಿರುವಾಗ ಸ್ಥಳಕ್ಕೆ ಆಗಮಿಸಿದ ಪಡುಪಣಂಬೂರು ಗ್ರಾ ಪಂ ಮಾಜೀ ಆದ್ಯಕ್ಷ ವಿನೋದ್ ಸಾಲ್ಯಾನ್ ಟ್ರಾಫಿಕ್ ಇನ್ಸ್‍ಪೆಕ್ಟರ್ ಮಂಜುನಾಥಗೆ ದೂರವಾಣಿ ಮುಖಾಂತರ 10 ದಿನಗಳ ಕಾಲಾವಕಾಶ ಕೇಳಿದ್ದಾರೆ. ಇದಕ್ಕೆ ಸ್ಥಳೀಯ ರಿಕ್ಷಾ ಚಾಲಕರು ಒಪ್ಪಿಗೆ ನೀಡಿದಾಗ ಪಾರ್ಕಿಂಗ್ ತರವು ಪ್ರಕ್ರಿಯೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಸಂದರ್ಭದಲ್ಲಿ ಜನನಿಬಿಡ ಹಾಗೂ ಸರಕಾರಿ ಜಾಗದ ಕೊರತೆಯಿಂದ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆದ ಬಳಿಕ ಮೂಲ್ಕಿಯಲ್ಲಿ ಕಾರು, ರಿಕ್ಷಾಗಳಿಗೆ ಸೂಕ್ತ ತಂಗುದಾಣದ ಕೊರತೆ ಕಂಡುಬಂದಿತ್ತು. ಅನಿವಾರ್ಯವಾಗಿ ಅವರು ರಸ್ತೆಯ ಪೂರ್ವ ದಿಕ್ಕಿನ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ನಡೆಸುತ್ತಾ ವ್ಯವಹಾರ ನಡೆಸುತ್ತಿದ್ದರು. ಇದರಿಂದ ಇಲ್ಲಿ ಟ್ರಾಫಿಕ್ ಸಮಸ್ಯೆಯೊಂದಿಗೆ ವಾಣಿಜ್ಯ ಮಳಿಗೆಗಳ ವ್ಯವಹಾರಕ್ಕೆ ತೊಂದರೆಯುಂಟಾಗಿತ್ತು.

ಈತನ್ಮಧ್ಯೆ ಕಾರು ಮತ್ತು ರಿಕ್ಷಾ ಚಾಲಕರು ಮತ್ತು ಮಾಲಕರು ತಮಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯಾಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು. ಆದರೆ ಹೆದ್ದಾರಿಗುಂಟ ಸೂಕ್ತ ಸರಕಾರಿ ಜಾಗ ದೊರಕದ ಕಾರಣ ಸಮಸ್ಯೆ ಪರಿಹಾರವಾಗಿರಲಿಲ್ಲ. ಕಿನ್ನಿಗೋಳಿ ರಸ್ತೆಯ ವಿಜಯಾ ಬ್ಯಾಂಕ್ ಮುಂಭಾಗದ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಿದ್ದರೂ, ಬಸ್ಸು ತಂಗುದಾಣ ದೂರವಾಗುವ ಭೀತಿಯಿಂದ ರಿಕ್ಷಾ-ಕಾರು ಚಾಲಕರು ಒಪ್ಪಿರಲಿಲ್ಲ.

ಸರ್ವೀಸ್ ರಸ್ತೆ ಪೂರ್ತಿಗೊಳಿಸಲು ಅಗ್ರಹ

ಮುಲ್ಕಿಕಾರು ಚಾಲಕ ಮಾಲಕ ಸಂಘದ ಅಧ್ಯಕ್ಷ ಮಧು ಆಚಾರ್ಯ ಪತ್ರಿಕೆಯೊಂದಿಗೆ ಮಾತನಾಡಿ ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅರ್ದಬರ್ಧವಾಗಿದ್ದು ಏಕಾಏಕಿ ರಿಕ್ಷಾ ನಿಲ್ದಾಣ ತೆರವು ಮಾಡಿರುವುದು ಸರಿಯಲ್ಲ. ನಿಂತು ಹೋಗಿರುವ ಎರಡೂ ಬದಿಯ ಸರ್ವಿಸ್ ರಸ್ತೆ ಕಾಮಗಾರಿ ಮೊದಲು ಪೂರ್ತಿಗೊಳಿಸಿ ಎಂದು ತಿಳಿಸಿದ್ದು, ಆ ಬಳಿಕ ಸಮಸ್ಯೆ ತಾನಾಗಿಯೆ ಪರಿಹಾರವಾಗುತ್ತದೆ ಎಂದಿದ್ದಾರೆ.