ನವಂಬರಿನಲ್ಲಿ ಸುರತ್ಕಲ್, ಬಂಟ್ವಾಳ ಆರ್ಟಿಒ ಆರಂಭ

ಸಾಂದರ್ಭಿಕ ಚಿತ್ರ

ಮಂಗಳೂರು : ಮುಂದಿನ ತಿಂಗಳಿಂದ ಮಂಗಳೂರಿನ ವಾಹನಗಳಲ್ಲಿ ಭಿನ್ನ ತರಹದ ನಂಬರ್ ಪ್ಲೇಟೊಂದು ಕಾಣ ಸಿಗಲಿದೆ. ಕುಳಾಯಿಯಿಂದ ಮೂಲ್ಕಿವರೆಗಿನ ವಾಹನಗಳಿಗೆ ಕೆಎ-19 ಬದಲಿಗೆ ಕೆಎ-62 ನಂಬರ್ ಸಿಗಲಿದೆ. ಅಂತೆಯೇ ಬಂಟ್ವಾಳ ತಾಲೂಕಿನ ವಾಹನಗಳಿಗೆ ಕೆಎ-70 ನಂಬ್ರ ಸಿಗಲಿದೆ.

ಇನ್ನು ಮುಂದೆ ಮಂಗಳೂರು ಆರ್‍ಟಿಒನ ಸುಮಾರು ಶೇ 40ರಷ್ಟು ವಾಹನಗಳ ನೋಂದಣಿ ಹೊಸದಾಗಿ ಆರಂಭಗೊಳ್ಳಲಿರುವ ಸುರತ್ಕಲ್ ಆರ್‍ಟಿಒನಲ್ಲಿ ನಡೆಯಲಿದೆ. ಇದೇ ರೀತಿ ಶೇ 25ರಷ್ಟು ವಾಹನಗಳ ನೋಂದಣಿ ಬಂಟ್ವಾಳದ ಆರ್‍ಟಿಒನಲ್ಲಿ ನಡೆಯಲಿದೆ. ಇದರಿಂದ ಮಂಗಳೂರು ಆರ್‍ಟಿಒ ಕಾರ್ಯಭಾರ ಶೇ 65ರಷ್ಟು ಕಡಿಮೆಯಾಗಲಿದೆ ಎಂದು ಉಸ್ತುವಾರಿ ಆರ್‍ಟಿಒ ಜಿ ಎಸ್ ಹೆಗ್ಡೆ ತಿಳಿಸಿದರು.

ಮಂಗಳೂರು ಆರ್‍ಟಿಒ ಈಗ ದಿನಕ್ಕೆ ಸುಮಾರು 600ರಿಂದ 650 ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ನಡೆಸುತ್ತಿದೆ.

“ಸುರತ್ಕಲ್ ಆರ್‍ಟಿಒ ವ್ಯಾಪ್ತಿಯೊಳಗೆ ಕೂಳೂರು ಸೇತುವೆಯಿಂದ ಮೂಲ್ಕಿ ಗಡಿ, ಕಿನ್ನಿಗೋಳಿಯಿಂದ ಬಜ್ಪೆ ಮತ್ತು ಮೂಡಬಿದ್ರೆಯಿಂದ ಕೈಕಂಬದವರೆಗಿನ ಕೆಲವು ಪ್ರದೇಶಗಳು ಒಳಗೊಳ್ಳಲಿವೆ. ಸುರತ್ಕಲ್ ಆರ್‍ಟಿಒಗಾಗಿ ಪಿಡಬ್ಲ್ಯೂಡಿ ಹೊಸಬೆಟ್ಟುವಿನ ಪ್ಲಾಮಾ ಕಟ್ಟಡದ ಕೆಳಗಡೆ ವ್ಯವಸ್ಥೆ ಮಾಡಿದೆ. ಇದಕ್ಕೆ ಸರ್ಕಾರ ತಿಂಗಳಿಗೆ 80,000 ರೂ ಬಾಡಿಗೆ ನೀಡಲಿದೆ” ಎಂದು ಹೆಗ್ಡೆ ತಿಳಿಸಿದರು. ಇದೇ ವೇಳೆ ಆರ್‍ಟಿಒಗೆ ಡ್ರೈವಿಂಗ್ ಪರೀಕ್ಷೆ ಮತ್ತು ವಾಹನ ತಪಾಸಣೆಗಾಗಿ ಎರಡು ಎಕ್ರೆ ಜಾಗ ಒದಗಿಸಲು ಕಟ್ಟಡ ಮಾಲಕರು ಒಪ್ಪಿಕೊಂಡಿದ್ದಾರೆ.

ಸಿಬ್ಬಂದಿ ಕೊರತೆಯಿಂದ ಈ ಪ್ರಸ್ತಾವ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಹೊಸ ಆರ್‍ಟಿಒಗೆ ಮಂಗಳೂರು ಮತ್ತು ಉಡುಪಿ ಆರ್‍ಟಿಒ ಸಿಬ್ಬಂದಿ ನೇಮಕಗೊಳ್ಳಲಿದ್ದಾರೆ ಎಂದರು.