ಕಂಬಳ ವಿವಾದ : ಕೇಂದ್ರ, ರಾಜ್ಯ ಸರಕಾರಗಳಿಗೆ ಸುಪ್ರೀಂ ನೋಟಿಸ್

ಸಾಂದರ್ಭಿಕ ಚಿತ್ರ

ಮುಂದಿನ ವಿಚಾರಣೆ ನ 13ಕ್ಕೆ

ಬೆಂಗಳೂರು :  ಕಂಬಳದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಪೆಟಾ ದಾಖಲಿಸಿದ್ದ ಅಪೀಲನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ನವೆಂಬರ್ 13ರಂದು  ನಡೆಯಲಿರುವ ಮುಂದಿನ ವಿಚಾರಣೆಗೆ ಹಾಜರಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸುವಂತೆ ಸರಕಾರಗಳಿಗೆ ನ್ಯಾಯಾಲಯ ತಿಳಿಸಿದೆ.

ಕಂಬಳ ಕ್ರೀಡೆಯನ್ನು ಆಯೋಜಿಸಲು ಅನುಮತಿಸುವ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಅಧ್ಯಾದೇಶ 2017 ಇದನ್ನು ರದ್ದುಪಡಿಸಬೇಕೆಂದು ಪೆಟಾ ಕೋರಿದೆ. ಈ ಬೆಳವಣಿಗೆಯ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಈಗಾಗಲೇ ನಿಗದಿಯಾಗಿರುವಂತೆ ಕಂಬಳ ಕ್ರೀಡೆಯನ್ನು ನವೆಂಬರ್ 11ರಿಂದ ಆಯೋಜಿಸಲು ನಿರ್ಧರಿಸಿದೆ.

ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಜಸ್ಟಿಸ್ ಎಂ ಕನ್ವಿಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ವಿಚಾರಣೆ ನಡೆಸುತ್ತಿದೆ. ಪೆಟಾದ ವಕೀಲ ಸಿದ್ಧಾರ್ಥ್ ಲುಥ್ರಾ ತಮ್ಮ ವಾದ ಮಂಡಿಸುತ್ತಾ, ಕಂಬಳ ಈ ತಿಂಗಳಲ್ಲಿ ಆರಂಭಗೊಳ್ಳಲಿರುವುದರಿಂದ  ಅಧ್ಯಾದೇಶದ ಜಾರಿಗೆ ತಡೆ ಹೇರಬೇಕೆಂದು ಕೋರಿದರು. ರಾಜ್ಯ ವಿಧಾನಸಭೆ ಅನುಮೋದಿಸಿದ್ದ ಮಸೂದೆಯನ್ನು ರಾಷ್ಟ್ರಪತಿ ಹಿಂದಕ್ಕೆ ಕಳುಹಿಸಿದ್ದರು ಎಂಬದನ್ನೂ  ಅವರು ನೆನಪಿಸಿದರು.

ನವೆಂಬರ್ 2016ರಲ್ಲಿ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶವೊಂದರಲ್ಲಿ ಕಂಬಳಕ್ಕೆ ನಿಷೇಧ ಹೇರಿದ ನಂತರ ಕಂಬಳವನ್ನು ಕಾನೂನುಬದ್ಧಗೊಳಿಸುವ ಸಲುವಾಗಿ ಕರ್ನಾಟಕ ಸರಕಾರ ಫೆಬ್ರವರಿಯಲ್ಲಿ ಪ್ರಾಣಿ ಹಿಂಸೆ ತಡೆ ಕಾನೂನು ತಿದ್ದುಪಡಿ ಮಸೂದೆ ಅನುಮೋದಿಸಿತ್ತು. ತಮಿಳುನಾಡಿಗೆ ಇದೇ ಮಾದರಿಯಾಗಿ ಜಲ್ಲಿಕಟ್ಟು ನಡೆಸಲು ಅನುಮತಿ ದೊರೆತ ನಂತರ ಕರ್ನಾಟಕ ಈ ಕ್ರಮಕ್ಕೆ ಮೊರೆ ಹೋಗಿತ್ತು.