ಜೀವನದ ಸೋಲಿಗೆ ಆತ್ಮಹತ್ಯೆ ದಾರಿಯಾಗದು

ಸಾಂದರ್ಭಿಕ ಚಿತ್ರ

ಜೀವನವನ್ನು ಮಂಗಳಕರವಾಗಿ ಮಾಡಿಕೊಂಡು ಬದುಕಿ, ಸಾಧಿಸಿ ತೋರಿಸುವುದು ಪ್ರಜ್ಞಾವಂತರ ಲಕ್ಷಣ. ಆತ್ಮಹತ್ಯೆಯನ್ನು ಮಾಡಿಕೊಂಡವರು ನೆಮ್ಮದಿಯಾಗಿ ತೆರಳುತ್ತಾರೆ. ಆದರೆ ಅವರ ಕುಟುಂಬದವರು ಶೋಕಸಾಗರದಲ್ಲಿ ನರಳುತ್ತಾರೆ.

  • ಎಂ ಅವಿನಾಶ್

ಮನುಷ್ಯನ ಜೀವನವೆಂಬುದು ಕಷ್ಟ-ಸುಖಗಳ ಸರಮಾಲೆ. ಏಳು-ಬೀಳುಗಳು, ನೋವು-ನಲಿವುಗಳು ಹಗಲು-ರಾತ್ರಿಯಂತೆ ನಿರಂತರವಾಗಿ ಸಾಗುವ ಒಂದು ಪ್ರಕ್ರಿಯೆಯಾಗಿದ್ದು, ಸಮಸ್ಯೆಗಳು ಉಂಟಾದಾಗ ಆತ್ಮಹತ್ಯೆ ದಾರಿ ಹಿಡಿಯುವುದಕ್ಕೆ ಹಲವು ಕಾರಣಗಳನ್ನು ಹುಡುಕಬಹುದು.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಾಗ, ನಿರುದ್ಯೋಗ ಸಮಸ್ಯೆ, ಪ್ರೇಮ ವೈಫಲ್ಯ, ಸಾಲಬಾಧೆ, ಇನ್ನಿತರೇ ಕಾರಣಗಳನ್ನು ನಾವು ಗಮನಿಸಬಹುದು. ಪ್ರತಿವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ನಂತರ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಆತ್ಮಹತ್ಯೆ ಸರಣಿಯನ್ನು ನಾವು ಮಾಧ್ಯಮಗಳಲ್ಲಿ ಗಮನಿಸಬಹುದಾಗಿದೆ. ಈ ರೀತಿಯ ಸಾವಿಗೆ ವಿದ್ಯಾರ್ಥಿಗಳು ಮಾತ್ರ ಕಾರಣವಲ್ಲ. ಅವರ ಪೋಷಕರ ವರ್ಗದವರು ಸಹ ಕಾರಣರಾಗುತ್ತಾರೆ. ಏಕೆಂದರೆ ಇಂತಹ ಮಕ್ಕಳಿಗೆ ಭೌತಿಕ ಸಾಮಥ್ರ್ಯದ ಅನುಗುಣವಾಗಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಪೋಷಕರು ಮಾಡಬೇಕಾಗುತ್ತದೆ.

ಕೇವಲ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದರೆ ಗೆದ್ದಂತೆ ಅನುತ್ತೀರ್ಣಗೊಂಡರೆ ಸೋತಂತೆ ಎಂಬ ತಪ್ಪು ತಿಳುವಳಿಕೆಯಿಂದ ಹೊರ ಬರುವಂತೆ ಮಾಡಬೇಕು. ಸೋಲೂ-ಗೆಲುವು, ಶಾಲೆಯಲ್ಲಿನ ಪಠ್ಯಗಳ ವಿಷಯಗಳು ಒಂದೇ ಕಾರಣವಲ್ಲ. `ಸೋಲೇ ಗೆಲುವಿನ ಸೋಪಾನ’ ಎಂಬ ಮಾತು ಅವರ ಅರಿವಿಗೆ ಬರುವಂತೆ ಮಾಡಬೇಕು. ದುರ್ಬಲ ಮನಸ್ಥಿತಿಯುಳ್ಳ ಮಕ್ಕಳಿಗೆ ಪೋಷಕರು ಅವರ ಮನಸ್ಸಿಗೆ ನೋವುಂಟು ಮಾಡದೇ ಆತ್ಮಸ್ಥೈರ್ಯ ತುಂಬಬೇಕು. “ಈ ಬಾರಿ ಇಲ್ಲದೇ ಇದ್ದರೇನಂತೆ, ಮರಳಿ ಯತ್ನಿಸು, ನೀನು ಗೆದ್ದೇ ಗೆಲ್ಲುವೇ, ಆ ಸಾಮಥ್ರ್ಯ ನಿನಗಿದೆ, ಧೈರ್ಯವಾಗಿ ನೀನು ಪ್ರಯತ್ನಿಸು, ನಿನ್ನ ಜೊತೆ ನಾವಿದ್ದೇವೆ” ಎಂದು ಧೈರ್ಯ ತುಂಬಬೇಕು. ಆ ಮಕ್ಕಳ ಮನಸ್ಸಿನಲ್ಲಿ ಧೈರ್ಯ ತುಂಬಿದಂತಾಗಿ ಆತ್ಮಹತ್ಯೆ ದಾರಿ ಮರೆಸಿ `ಸ್ಟೂಡೆಂಟ್ ಲೈಪ್ ಈಸ್ ಗೋಲ್ಡನ್ ಲೈಪ್’ ಆಗಿ ಉಳಿಯಲು ಸಾಧ್ಯ.

ಇನ್ನು ಕೆಲವರು ತಾನು ಓದಿದ ವಿದ್ಯಾರ್ಹತೆಗೆ ತಕ್ಕನಾದ ಸರ್ಕಾರಿ ಉದ್ಯೋಗ ಪಡೆಯಲು ಪ್ರಯತ್ನಿಸಿ ಉದ್ಯೋಗ ದೊರೆಯದಿದ್ದಾಗ, ಬೇಗ ಉತ್ಸಾಹ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ. ದೇಶದಲ್ಲಿ ಪ್ರತಿವರ್ಷ ಸುಮಾರು 30 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದು, ಇವರಲ್ಲಿ ಶೇಕಡ 85ರಷ್ಟು ಜನರು ನಿರುದ್ಯೋಗಿಗಳಾಗುತ್ತಿದ್ದಾರೆಂದು ಅಫೆಕ್ಸ್ ಗ್ಲೋಬಲ್ ಸಂಸ್ಥೆಯು ತನ್ನ ಸಮೀಕ್ಷೆಯ ಲೆಕ್ಕಾಚಾರದಲ್ಲಿ ತಿಳಿಸುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಲೇ ಇವೆ. ಹಲವಾರು ಕ್ಷೇತ್ರಗಳು ಇನ್ನೂ ಅರ್ಹ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿವೆ. ಒಂದಿಲ್ಲವೆಂದರೆ ಮತ್ತೊಂದು ಅವಕಾಶ ಸಿಕ್ಕೇ ಸಿಗುತ್ತದೆ. ಆತ್ಮಹತ್ಯೆ ಎಂಬುದ ಮಹಾಪಾಪ. ಆತ್ಮಹತ್ಯೆಯಿಂದ ಸಾಧಿಸುವುದಾದರೂ ಏನು ? ಜೀವನವೆಂಬುದು ಸಾಗರವಿದ್ದಂತೆ. ಅದರಲ್ಲಿ ನಾವು ಈಜುವುದನ್ನು ಕಲಿಯಬೇಕು. ಈಸಬೇಕು ಇದ್ದು ಜಯಿಸಬೇಕು.

ಇನ್ನು ಕೆಲವರು ಪ್ರೀತಿಸಿದ ಹುಡುಗ ಅಥವಾ ಹುಡುಗಿ ಸಿಗದಿದ್ದಾಗ ಅಥವಾ ಪ್ರೇಮವನ್ನು ಪೋಷಕರು ವಿರೋಧಿಸುತ್ತಾರೆ ಎಂದು ಭಯದಿಂದಲೂ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ನಿಜವಾದ ಪ್ರೀತಿಗೆ ಮೋಸವಾಗುವುದಿಲ್ಲವೆಂದು ಅರ್ಥ ಮಾಡಿಕೊಳ್ಳದವರು ಆತ್ಮಹತ್ಯೆಗೆ ಮುಂದಾಗುತ್ತಾರೆ. ಯಾವುದೂ ಒಳಿತು, ಯಾವುದು ಕೆಡುಕು ಎಂದು ಯೋಜಿಸದೇ ಪೋಷಕರ ಮನವೊಲಿಸಿ ಪ್ರೇಮ ಸಾಫಲ್ಯವಾಗುವಂತೆ ಮಾಡಿ ಜೀವನವನ್ನು ಮಧುರವಾಗಿಸಿಕೊಳ್ಳುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಸಾಲವು ಹೊನ್ನ ಶೂಲವಿದ್ದಂತೆ. ಸಾಲ ಮಾಡುವಾಗ ಖುಷಿಯಾಗಿರುತ್ತಾರೆ. ಸಾಲವನ್ನು ನಿರ್ದಿಷ್ಟವಾದ ಉದ್ದೇಶಕ್ಕೆ ಬಳಸದೇ ವೃಥಾ ಖರ್ಚು ಮಾಡಿ ತೀರಿಸಲಾಗದೇ ಆತ್ಮಹತ್ಯೆಗೆ ತಲೆಬಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಖರ್ಚನ್ನು ಕಡಿಮೆ ಮಾಡಿಕೊಂಡು ಲಾಭ ಬರುವಂತೆ ಮಾಡಿಕೊಳ್ಳುವ ಬುದ್ಧಿವಂತಿಕೆ ಪ್ರದರ್ಶಿಸಿ ಅಥವಾ ಕಷ್ಟಪಟ್ಟು ದುಡಿದು ಸಾಲಭಾದೆಯಿಂದ ಮುಕ್ತರಾಗಿ ಜೀವನ ಸಮೃದ್ಧಿ ಮಾಡಿಕೊಳ್ಳುವುದು. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಸರದ ಸಂಗತಿಯಾಗಿದೆ. ಬೆಳೆ ನಷ್ಟವಾದರೆ ಬೆಳೆವಿಮೆ ಇದೆ. ಸರಕಾರ ಬಡ್ಡಿರಹಿತ ಸಾಲ ಮತ್ತು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯುವಂತೆ ಮಾಡಿವೆ. ಇದನ್ನು ಅರ್ಥ ಮಾಡಿಕೊಂಡು ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು. ಯಾವುದಾದರೊಂದು ನೆಪ ಹೇಳಿಕೊಂಡು ಆತ್ಮಹತ್ಯೆಯ ದಾರಿ ಹಿಡಿಯುವುದು ಎಷ್ಟರಮಟ್ಟಿಗೆ ಸರಿ ?

ಜೀವನವನ್ನು ಮಂಗಳಕರವಾಗಿ ಮಾಡಿಕೊಂಡು ಬದುಕಿ, ಸಾಧಿಸಿ ತೋರಿಸುವುದು ಪ್ರಜ್ಞಾವಂತರ ಲಕ್ಷಣ. ಆತ್ಮಹತ್ಯೆಯನ್ನು ಮಾಡಿಕೊಂಡವರು ನೆಮ್ಮದಿಯಾಗಿ ತೆರಳುತ್ತಾರೆ. ಆದರೆ ಅವರ ಕುಟುಂಬದವರು ಶೋಕಸಾಗರದಲ್ಲಿ ನರಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರು ಅವರನ್ನು ಸಾಕಲು ಅವರ ಪೋಷಕ ವರ್ಗದವರು ಪಟ್ಟ ಪರಿಶ್ರಮ ವ್ಯರ್ಥ ಮಾಡಿ ಅವರ ಮನಸ್ಸಿಗೆ ನೋವುಂಟು ಮಾಡುವುದು ಸಹ ಪಾಪವಲ್ಲವೇ ? ಕಷ್ಟಗಳು ರಾತ್ರಿ ಇದ್ದಂತೆ. ರಾತ್ರಿಯಾದ ಮೇಲೆ ಬೆಳಕು ಬರಲೇಬೇಕು. ಪ್ರತಿಯೊಬ್ಬರ ಬಾಳಲ್ಲಿ ಒಂದು ಬೆಳಕು ಬಂದೇ ಬರುತ್ತದೆ ಎಂಬ ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ಜೀವನವನ್ನು ಸಫಲಗೊಳ್ಳಿಸಿಕೊಳ್ಳಿ.