ಕೆಪಿಎಸ್ಸಿಯಿಂದ ಸುಬೋಧ್ ವರ್ಗ ; ಅಧಿಕಾರಿಯ ಟ್ವೀಟ್ ಸೃಷ್ಟಿಸಿದ ವಿವಾದ

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಭ್ರಷ್ಟಾಚಾರವನ್ನು  ತಡೆಯುವ ಉದ್ದೇಶದಿಂದಲೇ ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರನ್ನು ಬಿಬಿಎಂಪಿಯಿಂದ ವಗಾಯಿಸಿ ಕೆಪಿಎಸ್ಸಿ ಕಾರ್ಯದರ್ಶಿಯಾಗಿ ನೇಮಕಗೊಳಿಸಿದ ಕೇವಲ ಆರು ತಿಂಗಳಲ್ಲಿ  ಸರಕಾರ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಿದೆ.

ಆದರೆ  ಸುಮ್ಮನೇ ಹೋಗಲೊಲ್ಲದ ಸುಬೋಧ್ ಯಾದವ್ ಇತ್ತೀಚೆಗೆ ಮಾಡಿದ ಟ್ವೀಟೊಂದು ಸಾಕಷ್ಟು ಸುದ್ದಿ ಮಾಡಿದೆ. “ತರಲು ಉದ್ದೇಶಿಸಿದ ಹಲವು ಬದಲಾವಣೆಗಳಿಂದಾಗಿ ಈಗಾಗಲೇ ಸಾಕಷ್ಟು ದ್ವೇಷ ಕಟ್ಟಿಕೊಂಡಿದ್ದೇನೆ. ಎಲ್ಲರನ್ನೂ ಸಂತುಷ್ಟಗೊಳಿಸಲು ಸಾಧ್ಯವಿಲ್ಲ. ವಿವಿಧ ರೀತಿಯ ಜನರು ಹಾಗೂ ವಿವಿಧ ರೀತಿಯ ಸ್ಥಾಪಿತ ಹಿತಾಸಕ್ತಿಗಳು ಇವೆ. ಬಹಳಷ್ಟು ಮಾಡಬೇಕೆಂದಿದ್ದೆ, ಆದರೆ ಮಾಡಲಾಗಲಿಲ್ಲ..” ಎಂದು ಅವರು ಟ್ವೀಟ್ ಮಾಡಿದ್ದು ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ ಯಾದವ್ ಅವರು ಕನಿಷ್ಠ ಶೇ 50ರಷ್ಟು ಕೆಪಿಎಸ್ಸಿ ಉದ್ಯೋಗಿಗಳನ್ನು ಅವರ ಮೂಲ ಇಲಾಖೆಗೆ ವರ್ಗಾಯಿಸಲ ಇಚ್ಛಿಸಿದ್ದರೂ ಇದನ್ನು ಹಲವರು ವಿರೋಧಿಸಿದ್ದರು.

ಗಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯ ಸಂದರ್ಶನದ ದಿನಾಂಕಗಳು ಹತ್ತಿರ ಬರುತ್ತಿರುವಂತೆಯೇ ಸುಬೋಧ್ ಯಾದವ್ ಅವರನ್ನು ವರ್ಗಾಯಿಸಿರುವುದು ಹಲವರ ಹುಬ್ಬೇರಿಸಿದೆ. ಸರಕಾರ ಸ್ಥಾಪಿತ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದಿದೆಯೆಂಬ ಆರೋಪಗಳೂ ಕೇಳಿಬರುತ್ತಿವೆ. ತರುವಾಯ ಕೆಪಿಎಸ್ಸಿ ನಡೆಸುವ ಹಲವು ಪರೀಕ್ಷೆಗಳಿಗೆ ಹಾಜರಾಗಿರುವ ಕೆಲ ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ನೇಮಕಾತಿ ಫಿಕ್ಸ್ ಮಾಡಲು ತಮಗೆ ಕರೆಗಳು ಬರುತ್ತಿವೆಯೆಂದು  ಹೇಳುತ್ತಿದ್ದಾರೆಂದು ಕೆಲ ವರದಿಗಳು ತಿಳಿಸಿವೆ.