ನಿರ್ಮಿತಿ ಕೇಂದ್ರದಿಂದ ಶಿರ್ವ ಮೀನು ಮಾರುಕಟ್ಟೆಯ ಕಾಮಗಾರಿ ಕಳಪೆ

ಶಿರ್ವ ಗ್ರಾ ಪಂ ಅಧ್ಯಕ್ಷೆ ಆರೋಪ 

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : 2014-15ನೇ ಸಾಲಿನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರ ಗುತ್ತಿಗೆ ವಹಿಸಿ ನಡೆಸಿದ ಶಿರ್ವದ ನೂತನ ಸುಸಜ್ಜಿತ ಮಹಿಳಾ ಮೀನು ಮಾರುಕಟ್ಟೆಯ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಾಗಿದೆ ಎಂಬುದಾಗಿ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಾರಿಜ ಪೂಜಾರ್ತಿ ಆರೋಪಿಸಿದ್ದಾರೆ.

85 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮೀನುಮಾರುಕಟ್ಟೆಯನ್ನು ಜಿ ಪಂ ಚುನಾವಣೆಯ ಸಂದರ್ಭ ತರಾತುರಿಯಲ್ಲಿ ಅಂದಿನ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿದ್ದು, ಈ ಕಳೆಪೆ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ಹಿಂದೆಯೇ ತಂದಿದ್ದರೂ ೂ ಅವರು ಯಾವುದೇ ರೀತಿಯಲ್ಲಿ ಸ್ಪಂದಿಸದ  ಕಾರಣ ಇದೀಗ ವರ್ಷವೊಂದು ಕಳೆಯುವ ಮೊದಲೇ ಒಳಚರಂಡಿಗೆ ಹಾಸಲಾದ ಚಪ್ಪಡಿಕಲ್ಲುಗಳು ಮುರಿದು ಮಾರುಕಟ್ಟೆಗೆ ಮೀನು ಸಾಗಿಸುತ್ತಿದ್ದ ವಾಹನದ ಚಕ್ರ ಡ್ರೈನೇಜ್ ಹೊಂಡದಲ್ಲಿ ಸಿಲುಕಿಗೊಂಡಿದೆ.

ಈ ಸಂದರ್ಭ ಮೀನುಗಾರ ಮಹಿಳೆಯರಿಗೂ ಹಾಗೂ ಗ್ರಾ ಪಂ ಅಧ್ಯಕ್ಷರಿಗೂ ಮಾತಿನ ಚಕಮಕಿ ನಡೆಯಿತು. “ಈ ಸಮಸ್ಯೆಯನ್ನು ಈ ಹಿಂದೆಯೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಈ ದುಃಸ್ಥಿತಿಗೆ ಅಧಿಕಾರಿಗಳ ಬೇಜವ್ದಾರಿಯೇ ಕಾರಣ ಹೊರತು ನಾನು ಜವಾಬ್ದಾರಳಲ್ಲ” ಎಂಬುದಾಗಿ ಗ್ರಾ ಪಂ ಅಧ್ಯಕ್ಷೆ ಹೇಳಿದ್ದಾರೆ. ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಸ್ಥಳಕ್ಕೆ ತಕ್ಷಣವೇ  ಕರೆಸುವಂತೆ ಮಹಿಳೆಯರು ಆಗ್ರಹಿಸಿದಾಗ ಶಿರ್ವ ಪೊಲೀಸರು ಮತ್ತು ಗ್ರಾ ಪಂ ಪ್ರತಿನಿಧಿಗಳು ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ಬಳಿಕ ಮೀನುಗಾರ ಮಹಿಳೆಯರು ತಣ್ಣಗಾಗಿದ್ದಾರೆ.