ಸ್ಟುಡಿಯೋ ಅಗ್ನಿ ದುರಂತದಲ್ಲಿ ಗಾಯಗೊಂಡವರು ಚೇತರಿಕೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯ ಪ್ರತಿಮಾ ಸ್ಟುಡಿಯೋಗೆ ಭಾನುವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದ್ದ ಸ್ಥಳಕ್ಕೆ ಮುಲ್ಕಿ ತಹಶೀಲ್ದಾರ್ ಕಿಶೋರಕುಮಾರ್ ಭೇಟಿ ನೀಡಿ ಹಾನಿ ಪರಿಶೀಲಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಿಲೋಮಿನಾ ಸ್ಥಳಕ್ಕೆ ಭೇಟಿ ನೀಡಿ, ಮಾದ್ಯಮದವರೊಂದಿಗೆ ಮಾತನಾಡಿ, “ಮುಲ್ಕಿ ಹೋಬಳಿಯಲ್ಲಿ ಅಗ್ನಿಶಾಮಕ ದಳದ ಅವಶ್ಯಕತೆ ಇದ್ದು, ಶಾಸಕ ಅಭಯಚಂದ್ರರ ಗಮನ ಸೆಳೆಯಲಾಗಿದೆ. ಕೂಡಲೇ ಮುಲ್ಕಿ ಹೋಬಳಿಯಲ್ಲಿ ಅಗ್ನಿಶಾಮಕದಳ ಘಟಕಕ್ಕೆ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಅಗ್ನಿದುರಂತದಲ್ಲಿ ಗಾಯ ಗೊಂಡಿರುವ ಅಗ್ನಿಶಾಮಕದಳದ ಸಿಬ್ಬಂದಿ ಸಹಿತ ಸ್ಥಳೀಯರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.ಸ್ಟುಡಿಯೋದ ಮಾಳಿಗೆಯಲ್ಲಿ ಅಗ್ನಿ ಕೆನ್ನಾಲಿಗೆ ಹರಡುತ್ತಿರುವಾಗ ಸ್ಥಳೀಯರು ಆಗ್ನಿಶಾಮಕದಳದ ಸಿಬ್ಬಂದಿಯನ್ನು ಮೇಲಕ್ಕೆ ಹೋಗಲು ಒತ್ತಾಯಿಸಿದ್ದು, ಫ್ಲೈವುಡ್ಡಿನ ಮಾಳಿಗೆಯಲ್ಲಿ ಮೇಲಕ್ಕೆ ಹೋಗುವಾಗ ಜಾರಿಬಿದ್ದು ಗಾಯಗೊಂಡಿದ್ದರು ಹಾಗೂ ಅಂಗಡಿಯ ಒಳಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದ ಸದ್ದು ಭಯಾನಕವಾಗಿದ್ದು, ಜನ ಚಲ್ಲಾಪಿಲ್ಲಿಯಾಗಿ ಓಡುತ್ತಿರುವ ದೃಶ್ಯ ಈಗಲೂ ಕಣ್ಣಿನ ಪಟಲದಲ್ಲಿ ಬರುತ್ತಿದೆ ಎಂದು ಸ್ಥಳೀಯ ದಾಮೋದರ್ ಕಟೀಲು ಹೇಳುತ್ತಾರೆ.