ಸಾಂಪ್ರದಾಯಿಕ ಮಾದರಿಯಲ್ಲೇ ಸಂಸ್ಕೃತ ಬೋಧನೆ ಮಾಡಲು ಆದ್ಯತೆ ನೀಡಬೇಕು

ರಾಷ್ಟ್ರೀಯ ವೇದ, ಸಂಸ್ಕೃತ ಸಮ್ಮೇಳನದ ನಿರ್ಣಯ

ಶಿರಸಿ : ಸಂಸ್ಕೃತವನ್ನು ಇಂದಿಗೂ ಯುರೋಪಿಯನ್ ವಿಧಾನವಾದ ವ್ಯಾಕರಣಾನುವಾದ ಪದ್ಧತಿಯಲ್ಲಿ ಕಲಿಸಲಾಗುತ್ತಿದೆ. ಆದರೆ ಈ ಕ್ರಮ ಸರಿಯಲ್ಲ. ಹಾಗಾಗಿ ಸಂಸ್ಕೃತವನ್ನು ಸಂಸ್ಕೃತ ಭಾಷೆಯಲ್ಲೇ ಕಲಿಸುವ ಸಾಂಪ್ರದಾಯಿಕ ಮಾದರಿಯಲ್ಲಿಯೇ ಬೋಧನೆ ಮಾಡಲು ಶಿಕ್ಷಣ ಸಂಸ್ಥೆಗಳು, ಸರ್ಕಾರ ಆದ್ಯತೆ ನೀಡಬೇಕು. ಈ ಕುರಿತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಜಾಗ್ರತೆ ಮೂಡಿಸಬೇಕೆಂಬ ನಿರ್ಣಯವನ್ನು ರವಿವಾರ ಸಂಜೆ ಸ್ವರ್ಣವಲ್ಲಿಯಲ್ಲಿ ನಡೆದ ರಾಷ್ಟ್ರೀಯ ವೇದ, ಸಂಸ್ಕೃತ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

ಸಂಸ್ಕೃತ ಶಿಕ್ಷಕರ ನೇಮಕಾತಿ ಆಗದೇ ರಾಜ್ಯದಲ್ಲಿ ಸಂಸ್ಕೃತ ಭಾಷಾ ಕಲಿಕೆಗೆ ತೀವ್ರ ಅಡಚಣೆಯಾಗಿದೆ. ರಾಜ್ಯದ ಪ್ರೌಢಶಾಲೆ, ಸಂಸ್ಕೃತ ಪಾಠಶಾಲೆ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ಸಂಸ್ಕೃತ ಶಿಕ್ಷಕರ ನಿವೃತ್ತಿ ನಂತರ ಖಾಲಿಯಿರುವ 1,000 ಸಂಸ್ಕೃತ ಶಿಕ್ಷಕರ ಹುದ್ದೆ ಖಾಲಿಯಿದೆ. ಇದರಿಂದ ಸಂಸ್ಕೃತ ಭಾಷಾ ಕಲಿಕೆಗೆ ಆಸ್ಪದವೇ ಇಲ್ಲದಂತಾಗಿದೆ. ಹೀಗಾಗಿ ಶಿಕ್ಷಣ ಮಂಡಳಿಗಳು ಖಾಲಿ ಹುದ್ದೆಗಳನ್ನು ತಕ್ಷಣ ತುಂಬುವ ಕಾರ್ಯ ಮಾಡಬೇಕು.

ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಲಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಸಂಸ್ಕೃತ ಭಾಷಾ ಬೋಧನೆ ಅಳವಡಿಸಿದ್ದಾರೆ. ಇದು ಶೇಕಡಾ 15ರಷ್ಟು ಶಾಲೆಗಳಲ್ಲಿ ಮಾತ್ರ ಅಳವಡಿಕೆಯಾಗಿದ್ದು, ಎಲ್ಲ ಶಾಲೆಗಳಿಗೂ ವಿಸ್ತರಿಸಬೇಕು. ಇದರೆಡೆ ಜಾಗೃತಿ ಮೂಡಿಸಲು ತರಬೇತಿ, ಸಂಭಾಷಣಾ ಶಿಬಿರಗಳ ಆಯೋಜನೆ ಆಗಬೇಕು. ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಪ್ರಮುಖರು ಪ್ರಾದೇಶಿಕ, ಜಿಲ್ಲಾಮಟ್ಟದಲ್ಲಿ ಪ್ರಯತ್ನ ಮಾಡಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

ವ್ಯಾವಹಾರಿಕ, ಪಾರಿಭಾಷಿಕ ಶಬ್ಧಗಳ ಸ್ಥಾನದಲ್ಲಿ ಇಂಗ್ಲಿಷ್ ಪದಗಳನ್ನು ಉಪಯೋಗಿಸುವ ರೂಢಿ ಬದಲಿಸಿ, ಸಂಸ್ಕೃತ ನಿಷ್ಠ ಮಾತೃಭಾಷೆಯ ಶಬ್ಧಗಳನ್ನು ಬಳಸುವಂತಾಗಬೇಕು. ಇದಕ್ಕಾಗಿ ಪಾರಿಭಾಷಿಕ ಶಬ್ಧಗಳ ಸಂಗ್ರಹ ಮತ್ತು ಸಂಶೋಧನೆಗಳು ಹೆಚ್ಚಬೇಕು. ಪ್ರಾಯೋಗಿಕ ವಿಷಯಗಳಾದ ಜ್ಯೋತಿಷ್ಯ,  ಆಯುರ್ವೇದ, ಯೋಗ, ಆಧ್ಯಾತ್ಮ, ಸಂಗೀತ, ಶಿಲ್ಪ, ಲೋಹ ಮುಂತಾದವುಗಳ ಶಾಸ್ತ್ರೀಯ ಅಧ್ಯಯನ, ಸಂಶೋಧನೆ, ಪರಿಷ್ಕಾರಗಳಿಗೆ ಹೆಚ್ಚಿನ ಅವಕಾಶ ಮತ್ತು ಪ್ರೋತ್ಸಾಹ ಸಿಗಬೇಕು. ಯಜ್ಞದಿಂದ ಪ್ರಕೃತಿ ವಿಕೋಪ, ವಾಯುಮಾಲಿನ್ಯದ ತಡೆ, ಖಗೋಲದ ರಕ್ಷಣೆ, ನೆಲ-ಜಲಗಳ ಪರಿಶುದ್ಧಿ ಮುಂತಾದ ವಿಶ್ವಾಸಾರ್ಹ ಅನೇಕ ಪ್ರಯೋಗಗಳಿವೆ. ಯಜ್ಞದಿಂದ ಸಕಲವೂ ನೆಮ್ಮದಿಯಿಂದ ಇರಬಹುದಾಗಿದೆ. ಯಜ್ಞರಕ್ಷಣೆಯಿಂದ ವೇದ, ಶಾಸ್ತ್ರ, ಪುರಾಣ, ಇತಿಹಾಸಗಳೆಲ್ಲ ರಕ್ಷಿಸಲು ಸಾಧ್ಯ. ಹಾಗಾಗಿ ಯಜ್ಞಗಳ ರಕ್ಷಣೆ ಮತ್ತು ನಡೆಸುವುದು ಜನರ ಕರ್ತವ್ಯವಾಗಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯಿಸಲಾಯಿತು.