ಮರವಂತೆ ಬೀಚಿಗೆ ವಿಹಾರಕ್ಕೆಂದು ಬಂದ ವಿದ್ಯಾರ್ಥಿಗಳಿಗೆ ಹಿಂಜಾವೇಗಳ ಬೆದರಿಕೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಮರವಂತೆ ಬೀಚಿಗೆ ಅಡ್ಡಾಡಲು ಬಂದಿದ್ದ ಉಡುಪಿ ಮೂಲದ ಐವರು ವಿದ್ಯಾರ್ಥಿಗಳನ್ನು ಕಂಡ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಲ್ಲೆಗೆ ಮುಂದಾಗಿ ಬೆದರಿಕೆ ಒಡ್ಡಿದ್ದಾರೆ. ಪ್ರವಾಸ ಬಂದವರಲ್ಲಿ ಇಬ್ಬರು ಸಹೋದರ, ಸಹೋದರಿಯರಾಗಿದ್ದರೆ, ಇನ್ನಿಬ್ಬರು ಯುವಕರು ಮತ್ತು ಯುವತಿ ಇದ್ದು, ಇವರೆಲ್ಲರೂ ಕಾರಿನಲ್ಲಿ ಮರವಂತೆಗೆ ತೆರಳಿದ್ದರು.

ಬೀಚಿಗೆ ತೆರಳುವ ದಾರಿ ಮಧ್ಯೆ ಕೋಟೇಶ್ವರದ ಬಳಿ ಇವರು ತೆರಳುತ್ತಿದ್ದ ಕಾರನ್ನು 10 ಮಂದಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ತಡೆದು

ನಿಲ್ಲಿಸಿದ್ದಾರೆ. ಅಲ್ಲದೆ ಬೆದರಿಕೆ ಹಾಕಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕುಂದಾಪುರ ಎಸ್ ಐ ನಾಸಿರ್ ಹುಸೇನ್ ಸ್ಥಳಕ್ಕೆ ಧಾವಿಸಿದ್ದು ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ, ಮಕ್ಕಳು ತಮ್ಮ ಅನುಮತಿ ಪಡದೇ ಜೊತೆಯಾಗಿ ತೆರಳಿದ್ದರು ಎಂದು ಹೇಳಿದ್ದಾರೆ.

ಈ ರೀತಿಯ ಬೆದರಿಕೆ ಪ್ರಕರಣಗಳು ಮತ್ತೆ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಂಘಟನೆ ಕಾರ್ಯಕರ್ತರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ಸಂದರ್ಭ ಮಾತನಾಡಿದ ವೇದಿಕೆ ಮುಖಂಡ, “ಇಂತಹ ಘಟನೆ ಮತ್ತೆ ಕಂಡು ಬಂದಲ್ಲಿ ಯಾವುದೇ ಮಾಹಿತಿ ನೀಡದೇ ನಾವು ನಮ್ಮ ಕೆಲಸ ಮಾಡುತ್ತೇವೆ” ಎಂದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅರವಿಂದ ಕೋಟೇಶ್ವರ, ಅಶೋಕ್, ರಾಕೇಶ್, ರಂಜನ್, ಅನಿಲ್, ಸಂಪತ್ ಮತ್ತು ಶಂಕರ್ ಕೋಟ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಉಡುಪಿಯಲ್ಲಿನ ನಿವಾಸಕ್ಕೆ ಸಂತ್ರಸ್ತ ವಿದ್ಯಾರ್ಥಿಗಳನ್ನು ಪೊಲೀಸ್ ಭದ್ರತೆಯಲ್ಲಿ ಕಳುಹಿಸಲಾಯಿತು.