ಮಕ್ಕಳಿಗೆ ಬೇಕಾಗಿರುವುದು ಸರಿಯಾದ ಪಾಠದ ಊಟ

ಶಿಕ್ಷಣ ಮಂತ್ರಿಗಳ ಹೇಳಿಕೆ ಅನ್ವಯ ಐದು ಕಿ ಮೀ.ಗೆ ಒಂದು ಪ್ರೌಢಶಾಲೆ ಎಂಬ ವಿಷಯ ತಿಳಿದು ಸಂತೋಷವೆನಿಸಿದರೂ ಇದೊಂದು ತಮಾಷೆ ಅನಿಸುತ್ತದೆ. ಹೊಸದಾಗಿ ಸೇರ್ಪಡೆಯಾಗುತ್ತಿರುವ ಶಿಕ್ಷಕರು ಎಲ್ಲಿಗೆ ನೇಮಕವಾಗುತ್ತಾರೋ ತಿಳಿಯುತ್ತಿಲ್ಲ. ಆದರೆ ಅನುದಾನಿತ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಪರಿಸ್ಥಿತಿ ಮಾತ್ರ ಚಿಂತಜನಕವಾಗಿದೆ. ನಿವೃತ್ತಿಯಾಗುತ್ತಿರುವ ಶಿಕ್ಷಕರ ಬದಲಿಗೆ ಹೊಸ ನೇಮಕಾತಿಯನ್ನು ಮಾಡದೇ ಇರುವುದು ಶಾಲಾ ಆಡಳಿತ ಮಂಡಳಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಕ್ಕಳು ಬಯಸುವುದು ಸರಕಾರದ ಸಮವಸ್ತ್ರ, ಊಟ, ಹಾಲು ಅಥವಾ ಸೈಕಲ್ ಅಲ್ಲ  ಅವರಿಗೆ ಬೇಕಿರುವುದು ಸರಿಯಾದ ಪಾಠದ ಊಟ. ಅದೇ ಇಲ್ಲದಿದ್ದರೆ ಎಂತಹ ಶಿಕ್ಷಣ ನೀತಿ ಇದು ಎಂದು ಕೇಳಬೇಕಾಗುತ್ತದೆ
ಅನುದಾನಿತ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳನ್ನು ಉಳಿಸಿಕೊಳ್ಳುವುದಕ್ಕಾಗಿ ಸರಕಾರ ಶಿಕ್ಷಣ ಇಲಾಖೆ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಸರಕಾರಿ ಶಾಲೆಗಳಿಂದಲಾದರೂ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿದರೆ ಶಾಲೆ ಉಳಿಯುವುದಲ್ಲದೆ ಬೆಳೆದಾವು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಷ್ಠಿತ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕ ಆರ್ಥಿಕ ಹೊರೆಯಾಗಿ ಪರಿಣಮಿಸಿ  ಅಧಃಪತನಕ್ಕೆ ಪ್ರೇರಣೆ ನೀಡಿ ಅನಾಹುತ ಸಂಭವಿಸಿದರೆ ಅದಕ್ಕೆ ಉತ್ತರಿಸುವವರು ಯಾರು

  • ನೊಂದ ಶಾಲೆ ಸದಸ್ಯರು  ಉಡುಪಿ