ರೈಲಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ವಿದ್ಯಾರ್ಥಿಯೊಬ್ಬ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದ್ರಾಳಿ ರೈಲ್ವೇ ಹಳಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಮಣಿಪಾಲದಲ್ಲಿರುವ ವ್ಯಾಲಿವ್ಯೂ ಇಂಟರನ್ಯಾಷನಲ್ ಹೋಟೆಲ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಕಲಿಯುತ್ತಿದ್ದ, ಉಡುಪಿ ನಗರದ ಹೊರವಲಯದ ನಿಟ್ಟೂರು ನಿವಾಸಿ ಪ್ರತೀಕ್ ದೇವಾಡಿಗ (22) ಆತ್ಮಹತ್ಯೆ ಮಾಡಿಕೊಂಡವ.

ಈತ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತನ್ನ ತಾಯಿಯು ಒಂದು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಮಾನಸಿಕ ಅಸ್ವಸ್ಥರಾಗಿದ್ದಾರೆ. ತಾಯಿಯ ಅಸೌಖ್ಯದಿಂದಾಗಿ ನೊಂದು ಆತ್ಮಹತ್ಯೆಗೈದಿರುವುದಾಗಿ ತಿಳಿಸಿದ್ದಾನೆ. ಇನ್ನೊಂದು ಮೂಲದ ಪ್ರಕಾರ ಪ್ರತೀಕ್ ತಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಎರಡು ದಿನದ ಹಿಂದೆ ಜಗಳವಾಡಿದ್ದಾನೆ ಎಂದು ತಿಳಿದುಬಂದಿದ್ದು, ಇದೇ ಕಾರಣಕ್ಕೆ ಆತ ನೊಂದು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದಾನೆನ್ನಲಾಗಿದೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.