ಭಿಕ್ಷೆ ಎತ್ತುವ `ಬಿಳಿತೊನ್ನು’ ರೋಗದ ಮಕ್ಕಳಿಗೆ ನೆರವಾದ ನಗರ ವಿದ್ಯಾರ್ಥಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೆಲವು ವರ್ಷದಿಂದ ನಗರದ ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಅಲ್ಬಿನೋ ರೋಗಗ್ರಸ್ಥ (ಬಿಳಿತೊನ್ನು) ಆರು ಮಂದಿ ಮಕ್ಕಳು ಮತ್ತು ಅವರ ಕುಟುಂಬಿಕರಿಗೆ ನೆರವಾಗಿರುವ ಮಂಗಳೂರು ವಿ ವಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾರ್ವಜನಿಕರಿಂದ ಸೈ ಎನಿಸಿಕೊಂಡಿದ್ದಾರೆ.

ಮಂಗಳೂರು ವಿ ವಿ ಕಾಲೇಜಿನ ಬಿಎ ತರಗತಿಯ ಅಂತಿಮ ವರ್ಷದ ಅಬೂಬಕ್ಕರ್ ಈ ಶ್ರೇಷ್ಠ ಸಾಧನೆಗೆ ಭಾಜನರಾದ ವಿದ್ಯಾರ್ಥಿಯಾಗಿದ್ದು, ಇವರು ಮೂಲತಃ ಬೆಳ್ತಂಗಡಿಯವರು. ತರಗತಿ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಅಬೂಬಕ್ಕರ್, ಸ್ಟೇಟ್ ಬ್ಯಾಂಕಿನ ಬೀದಿಬದಿಯಲ್ಲಿ ಬಿಳಿತೊನ್ನು ರೋಗ ಬಾಧಿತ ಕೆಲವು ಮಕ್ಕಳು ಭಿಕ್ಷಾಟನೆ ಮಾಡುವುದನ್ನು ಕಂಡಿದ್ದು, ಈ ಕುಟುಂಬಕ್ಕೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದರು.

“ಈ ಮಕ್ಕಳಲ್ಲಿ ಕೆಲವರಿಗೆ ನಾಲ್ಕು ವರ್ಷವಾಗಿದೆ. ಇವರು ಬಸ್ಸುಗಳಲ್ಲಿ ಬೇಡುತ್ತಿದ್ದರು. ಕೆಲವು ಬಾರಿ ಈ ಮಕ್ಕಳು ಬಸ್ಸಿನೊಳಗೆ ಬೇಡುತ್ತಿರುವಾಗಲೇ ಬಸ್ಸುಗಳು ಮುಂದೆ ಹೋಗಿ, ಬಿದ್ದು ಗಾಯ ಮಾಡಿಕೊಂಡಿರುವುದುಂಟು” ಎಂದು ಅಬೂಬಕ್ಕರ್ ಹೇಳುತ್ತಾರೆ.

ಹೇಗೆ ನೆರವಾದರು ?ನಗರದ ಯೋಗ ಸಂಸ್ಥೆಯಾದ ಯುವ ಸೇವಾ ಸಂಘಟನೆಯು ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ `ದಿವ್ಯಾಸ್ ಯೋಗ ಸೇವಾ’ ಎಂಬ ಸಮಗ್ರ ಯೋಗ ಸತ್ಸಂಗ ಪ್ರಾಜೆಕ್ಟ್ ಆಯೋಜಿಸಿದ್ದು, ಅಬೂಬಕ್ಕರ್ ಸಹಿತ ಇಬ್ಬರು ವಿದ್ಯಾರ್ಥಿಗಳು ಕಾಲೇಜನ್ನು ಪ್ರತಿನಿಧಿಸಿದ್ದರು. ಸ್ಪರ್ಧೆ ಆರು ಹಂತದಲ್ಲಿದ್ದು, `ಸೇವಾ ಯೋಜನೆ’ ಎಂಬ ಹಂತದಲ್ಲಿ, ಒಬ್ಬರ ಜೀವನ ಪರಿವರ್ತನೆಗಾಗಿ ಸಕ್ರಿಯ ಕೆಲಸ ಮಾಡಬೇಕಿತ್ತು. ಈ ಸುತ್ತಿನ ಸ್ಪರ್ಧೆ ನವಂಬರ್ 15ರಿಂದ ಡಿಸೆಂಬರ್ 10ರವರೆಗೆ ನಡೆದಿತ್ತು.

ಸಮಾಜ ಸೇವೆ ಎಂದಾಕ್ಷಣ ಅಬೂಬಕ್ಕರಿಗೆ ಹೊಳೆದಿರುವುದು ಈ ಬಿಳಿತೊನ್ನಿನ ಮಕ್ಕಳ ಸುಧಾರಣೆ. ನೇರವಾಗಿ ಸ್ಟೇಟ್ ಬ್ಯಾಂಕಿನತ್ತ ತೆರಳಿದ ಅವರು, ಈ ಮಕ್ಕಳು ಮತ್ತು ಕುಟುಂಬ ಸದಸ್ಯರ ಬಗ್ಗೆ ಮಾಹಿತಿ, ಚಿತ್ರ ಸಂಗ್ರಹಿಸಿ, ಡಿಸೆಂಬರ್ 7ರಂದು ದ ಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ (ಡಿಸಿಪಿಯು) ಪತ್ರ ಬರೆದರು.

ಮೂರು ದಿನಗಳ ಬಳಿಕ ಡಿಸಿಪಿಯು ಅಧಿಕಾರಿಗಳು ಈ ಮಕ್ಕಳ ಸಹಿತ ಕುಟುಂಬದ ಮೂವರು ಮಹಿಳೆಯರನ್ನು ರಕ್ಷಿಸಿ ಬೋಂದೆಲಿನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದರು. ಅಲ್ಲಿನ ಮಕ್ಕಳಿಂದ ಈ ಮಕ್ಕಳಿಗೆ ಉತ್ತಮ ಬೆಂಬಲ ಸಿಕ್ಕಿಲ್ಲ. ಕಾರಣ, ದ ಕ ಸಿಡಬ್ಲ್ಯೂಸಿ ಅಧಿಕಾರಿಗಳು, ರಾಜಸ್ತಾನದ ಸಿಡಬ್ಲ್ಯೂಸಿ ಸಂಪರ್ಕಿಸಿ, ಇವರನ್ನು ಹುಟ್ಟೂರು ರಾಜಸ್ತಾನಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದರು.

“ವಿದ್ಯಾರ್ಥಿಗಳು ಕೇವಲ ಪರೀಕ್ಷೆ ಬರೆದರೆ ಸಾಲದು. ವಿದ್ಯಾರ್ಥಿ ದೆಸೆಯಲ್ಲೇ ವಿದ್ಯಾರ್ಥಿಗಳಿಂದ ಇಂತಹ ಅಮೂಲ್ಯ ಸಮಾಜ ಸೇವೆ ಬಯಸಿದ್ದೇವೆ. ಅಬೂಬಕ್ಕರ್ ಇತರರಿಗೆ ಮಾದರಿ” ಎಂದು ಕಾಲೇಜಿನ ಪ್ರಾಂಶುಪಾಲ ಬಾರ್ಕೂರು ಉದಯ ಕುಮಾರ್ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.