ನೋಟು ಅಮಾನ್ಯ ಫೇಸ್ಬುಕ್ಕಿನಲ್ಲಿ ಟೀಕಿಸಿದ್ದಕ್ಕೆ ವಿದ್ಯಾರ್ಥಿಯ ಬಂಧಿಸಿದ ಮ ಪ್ರ ಪೊಲೀಸರು

ಅಭಿಶೇಕ್ ಮಿಶ್ರಾ

ಬಿಜೆಪಿ ರಾಜ್ಯದಲ್ಲಿ ಎಮರ್ಜನ್ಸಿ ನೆನೆಪಿಸುವಂಥ ವಿದ್ಯಮಾನ

`ಬಿಜೆಪಿಯವರು ಸುಳ್ಳು ಸುದ್ದಿಗಳನ್ನೇ ಪೋಸ್ಟ್ ಮಾಡುತ್ತಿದ್ದಾರೆ ಹಾಗೂ ಯಾರೂ ಅವರ ವಿರುದ್ಧ ಮಾತನಾಡಲು ಸಿದ್ಧರಿಲ್ಲ.’

ಇಪ್ಪತ್ತರ ಹರೆಯದ ಸಿವಿಲ್ ಇಂಜಿನಿಂರಿಂಗ್ ವಿದ್ಯಾರ್ಥಿ ಅಭಿಷೇಕ್ ಮಿಶ್ರಾ ನೋಟು ಅಮಾನ್ಯದ ವಿರುದ್ಧ ಹಾಗೂ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧದ ಪೋಸ್ಟ್ ಒಂದನ್ನು  ಫೇಸ್ಬುಕ್ಕಿನಲ್ಲ ನವೆಂಬರ್ 11ರಂದು ಮಾಡಿದ್ದರು.

ಒಂಬತ್ತು ಗಂಟೆಗಳೊಳಗಾಗಿ ಮಧ್ಯ ಪ್ರದೇಶ ಪೊಲೀಸರು ಆತನ ಮನೆ ಬಾಗಿಲಿನಲ್ಲಿದ್ದರು. ಅವರ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಅಜ್ಞಾತ ಸ್ಥಳವೊಂದರಲ್ಲಿ 12 ಗಂಟೆಗಳ ಕಾಲ ಇರಿಸಿದರು.

ಭೋಪಾಲದ  ಸೈಬರ್ ಸೆಲ್ ಇನಸ್ಪೆಕ್ಟರ್ ರವಿಕಾಂ ದೆಹರಿಯಾ ಈ ಬಂಧನವನ್ನು ದೃಢೀಕರಿಸಿದ್ದಾರೆ. ಅಭಿಷೇಕ್  ಮುಖ್ಯಮಂತ್ರಿ ಮತ್ತು ಇತರ ಗಣ್ಯರ ವಿರುದ್ಧ ಅವಮಾನಕಾರಿ  ಕಮೆಂಟ್ ಹಾಗೂ ಪೋಸ್ಟ್ ಮಾಡುತ್ತಿದ್ದಾರೆಂಂದು  ಅವರು ತಿಳಿಸಿದ್ದರು. “ನಾವು ಆತನನ್ನು ಬಂಧಿಸಿ, ಆತನ ಎಲ್ಲಾ ಪೋಸ್ಟಗಳನ್ನು ಫೇಸ್ಬುಕ್ಕಿನಿಂದ ಡಿಲೀಟ್ ಮಾಡಿ ಆತನ ವೆಬ್ ಸೈಟನ್ನು ಬ್ಲಾಕ್ ಮಾಡಿದ್ದೇವೆ” ಎಂದೂ ಅವರು ಹೇಳಿದದ್ದಾರೆ.

ತಾನು ಪೊಲೀಸರ ಕೈಯ್ಯಲ್ಲಿ ಪಟ್ಟ ಪಾಡನ್ನು ಅಭಿಷೇಕ್ ಮಿಶ್ರಾ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.

 

 * ನವೆಂಬರ್ 11 ರ ಮಧ್ಯರಾತ್ರಿ ಏನು ನಡೆಯಿತೆಂದು ನೀವು ಹೇಳಬಹುದೇ ?

ಸಾಮಾನ್ಯ ಉಡುಪಿನಲ್ಲಿದ್ದ ಎಂಟು ಮಂದಿ ಪೊಲೀಸರು ನನ್ನ ಮನೆಗೆ ಮಧ್ಯರಾತ್ರಿ ಬಂದಿದ್ದರು. ನನ್ನನ್ನು ಕರೆದುಕೊಂಡು ಹೋಗಿ ನನ್ನ ಕಣ್ಣಿಗೆ ಬಟ್ಟೆ ಕಟ್ಟಿದರು. ಅವರು ನನ್ನನ್ನು ಎಲ್ಲಿ ಕರೆದುಕೊಂಡು ಹೋದರೆಂದು ನನಗೆ ತಿಳಿದಿಲ್ಲ. ಅಲ್ಲಿ ಅವರು ನನ್ನನ್ನು 12 ಗಂಟೆಗಳ ಕಾಲ ಇರಿಸಿದರು. ಅವರು ನನಗೆ ಬಾತ್ ರೂಮಿಗೆ ಹೋಗಲು ಅನುವು ಮಾಡಿಕೊಟ್ಟರು ಹಾಗೂ ನನಗೆ ಚಹಾ ಕೊಟ್ಟರೆಂಬುದೇ ಸಮಾಧಾನದ ಸಂಗತಿ.

 

* ಮಧ್ಯ ಪ್ರದೇಶ ಸರಕಾರ ಅಸಮಾಧಾನಗೊಳ್ಳುವಂತಹದ್ದೇನು ನಿಮ್ಮ ಪೋಸ್ಟಿನಲ್ಲಿತ್ತು ?

ನೋಟು ಅಮಾನ್ಯದ ವಿಚಾರದಲ್ಲಿ ನಾನು ಮಧ್ಯ ಪ್ರದೇಶದ ಮುಖ್ಯಮಂತ್ರಿ ವಿರುದ್ಧ  ಪೋಸ್ಟ್ ಒಂದನ್ನು ನವೆಂಬರ್ 11ರ ಅಪರಾಹ್ನ ಮಾಡಿದ್ದೆ. ಇದಾಗಿ ಒಂಬತ್ತು ಗಂಟೆಗಳೊಳಗಾಗಿ ನನ್ನನ್ನು ಬಂಧಿಸಲಾಯಿತು.

 

* ನೀವು ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದೀರಲ್ಲವೇ ?

ಹೌದು. ಇದನ್ನು ನಾನು ಒಪ್ಪುತ್ತೇನೆ. ಆದರೆ ಮೂಲವೊಂದರಿಂದ ಇದು ನನಗೆ ತಿಳಿದು ಬಂದಿತ್ತು. ನನ್ನ ಪೋಸ್ಟ್ ತಪ್ಪೆಂದು ಅವರಿಗೆ ಕಂಡಿದ್ದರೆ ಅವರು ನನ್ನ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಬಹುದಾಗಿತ್ತು. ಅದೇಕೆ ಅವರು ನನ್ನನ್ನು ರಾತ್ರಿ ವೇಳೆ ಕರೆದೊಯ್ದರು ?

 

* ನೀವು ಬಿಜೆಪಿ ವಿರೋಧಿಯೇ ?

ನಾನೇನು ಬಿಜೆಪಿ ವಿರೋಧಿಯಲ್ಲ. ನನಗೆ ಯಾವತ್ತೂ ಬಿಜೆಪಿಯೆಂದರೆ ಇಷ್ಟವಿತ್ತು. ನೀವು ನನ್ನ ಹಿಂದಿನ ಪೋಸ್ಟ್ ಗಳನ್ನು ನೋಡಿ. ನಾನು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಹೊಗಳಿದ್ದೇನೆ. ಅವರೊಬ್ಬ ಒಳ್ಳೆಯ ಮುಖ್ಯಮಂತ್ರಿ ಎಂದು ನಾನು ಹೇಳಿದಷ್ಟು ಸಮಯ ಎಲ್ಲವೂ ಚೆನ್ನಾಗಿತ್ತು.  ಆದರೆ ಅವರನ್ನು ನಾನು ಟೀಕಿಸಿದಂದಿನಿಂದ ಎಲ್ಲರೂ ನನ್ನ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ. ಬಿಜೆಪಿ ಸುಳ್ಳು ಸುದ್ದಿ ಹರಡುವುದಿಲ್ಲವೇನು ? ನನ್ನಲ್ಲಿ ಸಾಕ್ಷ್ಯಗಳಿವೆ.  ಆದರೆ  ಯಾರು ಕೂಡ ಬಿಜೆಪಿಯ ಐಟಿ ಘಟಕದ  ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಅವರ ವಿರುದ್ಧ ಮಾತನಾಡುವವರನ್ನು ಮಾತ್ರ ಅವರು ಬಂಧಿಸುತ್ತಾರೆ. ಸುಳ್ಳು ಸುದ್ದಿ ಹರಡುವ ಮುಖ್ಯವಾಹಿನಿ ಮಾಧ್ಯಮದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ, ಆದರೆ ನನ್ನಂತಹ ಸಣ್ಣ ಮನುಷ್ಯನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

 

 * ಹಾಗಾದರೆ ನಿಮ್ಮ ವಿರುದ್ಧ ಮಾನನಷ್ಟ ಕಾನೂನಿನನ್ವಯ ಪ್ರಕರಣ ದಾಖಲಿಸಬೇಕಿತ್ತೆಂದು ನಿಮ್ಮ ಭಾವನೆಯೇ ?

ಹೌದು, ಅವರು ಹಾಗೆ ಮಾಡಬೇಕಿತ್ತು. ನಾನೇನಾದರೂ ತಪ್ಪು ಮಾಡಿದ್ದರೆ ನಾನು ಸಾರ್ವಜನಿಕವಾಗಿ ಚೌಹಾಣ್ ಅವರಲ್ಲಿ ಕ್ಷಮೆಯಾಚಿಸುತ್ತಿದ್ದೆ. ಆದರೆ ಅವರು ನನ್ನ ವಿರುದ್ಧ ಎಫ್ ಐ ಆರ್ ದಾಖಲಿಸಿದರು. ಇದು ತಪ್ಪೆಂದು ನನ್ನ ಭಾವನೆ. ಅವರು ಐಪಿಸಿಯ ಸೆಕ್ಷನ್ 469 ಹಾಗೂ ಐಟಿ ಕಾಯಿದೆಯ ಸೆಕ್ಷನ್ 66ಸಿ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

 

* ನೋಟು ಅಮಾನ್ಯದ ಬಗ್ಗೆ ನೀವೇನು ಬರೆದಿದ್ದೀರಿ ?

ಜನರು ಬಹಳಷ್ಟು ತೊಂದರೆಗೀಡಾಗುತ್ತಾರೆ ಹಾಗೂ 50 ಮಂದಿ ನೋಟು ಅಮಾನ್ಯದಿಂದ ಸತ್ತಿದ್ದಾರೆಂದು ನಾನು ಬರೆದಿದ್ದೆ.

 

* ನಿಮ್ಮನ್ನು ವಶಕ್ಕೆ ಪಡೆದುಕೊಂಡಾಗ ಏನಾಯಿತು ?

ನನಗೆ ಹೆದರಿಕೆಯಾಯಿತು ಹಾಗೂ ನನಗೆ ಅವರು ಹೊಡೆಯಬಹುದೆಂದು ಅನಿಸಿತು. ನನಗೆ ಏನು ಬೇಕಾದರೂ ಆಗಬಹುದು ಹಾಗೂ ನಾನು ಸಾಯಬಹುದು ಎಂದು ಅಂದುಕೊಂಡೆ. ವ್ಯಾಪಂ ಹಗರಣದ ಬಗ್ಗೆ ವರದಿ ಮಾಡುತ್ತಿದ್ದ `ಆಜ್ ತಕ್’ ವರದಿಗಾರ ಅಕ್ಷಯ್ ಸಿಂಗ್ ಅವರು ಕೂಡ ಶಂಕಾಸ್ಪದವಾಗಿ ಸಾವಿಗೀಡಾಗಿದ್ದರು.

 

 * ನಿಮ್ಮ ಹೆತ್ತವರನ್ನು ಅಥವಾ ವಕೀಲರನ್ನು ಸಂಪರ್ಕಿಸಬೇಕೆಂದು ಎಂದು ನೀವು ಪೊಲೀಸರಲ್ಲಿ ಹೇಳಲಿಲ್ಲವೇ ?

ನನ್ನನ್ನು ಬಂಧಿಸಲೆಂದು ಅವರು ಬಂದಾಗ ನಾನು ಮನೆಯಲ್ಲಿ ಒಬ್ಬನೇ ಇದ್ದೆ. ಯಾರಿಗಾದರೂ ಕರೆ ಮಾಡುವ ಎಂದರೆ ಅವರು ಅದಕ್ಕೂ ಅನುಮತಿ ನೀಡಿಲ್ಲ. ಅವರು ಬಂದು ನನ್ನನ್ನು ಕಾರಿನೊಳಗೆ ತಳ್ಳಿದರು. ಮರುದಿನವಷ್ಟೇ ನಾನು ನನ್ನ ಕುಟುಂಬಕ್ಕೆ ಕರೆ ಮಾಡುವ ಅವಕಾಶ ದೊರೆಯಿತು.

 

* ಅವರು ನಿಮ್ಮನ್ನು ಮನೆಗೆ ಹೋಗಲು ಏಕೆ ಬಿಟ್ಟರು ?

ಮರುದಿನ ಅವರು ನನ್ನ ಸ್ನೇಹಿತರನ್ನು ಕರೆದರು ಹಾಗೂ ನನ್ನನ್ನು ಬಿಡುಗಡೆ ಮಾಡಿದರು. ನಾನು  ಯಾವುದೇ ಪೊಲೀಸ್ ಅಧಿಕಾರಿ ಅಥವಾ ಬೇರ್ಯಾರನ್ನಾದರೂ ನೋಡಿಲ್ಲ.

 

* ನೀವು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಯೂನಿಯನ್ನಿನವರೇ ?

ನಾನು ಕೇವಲ ಒಬ್ಬ ವಿದ್ಯಾರ್ಥಿ  ನನಗೆ ಕೇವಲ ರಾಜಕೀಯ  ಅಭಿಪ್ರಾಯಗಳಿವೆ ಹಾಗೂ ನನಗೆ ಸರಿ ಕಂಡಿದ್ದನ್ನು ನಾನು ಪೋಸ್ಟ್ ಮಾಡಿದ್ದೇನೆ. ಹೀಗೆಲ್ಲ ಆಗುವುದೆಂದು ನಾನು ಎಣಿಸಿರಲೇ ಇಲ್ಲ. ನನ್ನ ರಾಜಕೀಯ ಅಭಿಪ್ರಾಯಗಳಿಂದ  ನನಗೆ ನ್ಯಾಯಾಲಯಕ್ಕೀಗ ಡಿಸೆಂಬರ್ 3ರಂದು ಹೋಗಬೇಕಿದೆ.

 

`ನನ್ನ ಪೋಸ್ಟ್ ಅವಹೇಳನಕಾರಿಯಾಗಿದ್ದರೆ, ಸರಕಾರ ನನ್ನ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಬಹುದಾಗಿತ್ತು’

 

* ನಿಮ್ಮ ಮನೆಯಲ್ಲಿ ಪೊಲೀಸರೇನು ಮಾಡಿದರು ?

ಅವರು ನನ್ನ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ತೆಗೆದುಕೊಂಡು ಹೋದರು. ಅವರು ನನ್ನ ಪಾಸ್ ವರ್ಡ್ ಕೇಳಿ ನನ್ನ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ತೆರೆದು ನನ್ನ ಖಾಸಗಿ ಫೋಟೋಗಳು ಹಾಗೂ ವಾಟ್ಸಪ್ ಸಂದೇಶಗಳನ್ನು ನನ್ನ ಅನುಮತಿಯಿಲ್ಲದೆ ಓದಿದರು.

 

* ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಹೆಚ್ಚು ಜವಾಬ್ದಾರಿಯುತರಾಗಿರಬೇಕೆಂದು ನಿಮಗನಿಸುತ್ತದೆಯೇ ? ಅಥವಾ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೆಂದು ನೀವು ತಿಳಿಯುತ್ತೀರಾ ?

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹೀಗೆಲ್ಲಾ ಆಗುತ್ತಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗಿನ ಐಟಿ ಸಚಿವ ಕಪಿಲ್ ಸಿಬಲ್ ಅವರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಹೇಳಿದ್ದರು. ಆಗ ಬಿಜೆಪಿ ಅದರ ವಿರುದ್ಧ ಪ್ರತಿಭಟಿಸಿತ್ತು. ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪು ಫೋಟೋಗಳನ್ನು ಪೋಸ್ಟ್ ಮಾಡಿದರು. ಈಗ ಕೂಡ ಅವರು ಅದನ್ನೇ ಮಾಡುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಸುದ್ದಿಗಳನ್ನೇ ಪೋಸ್ಟ್ ಮಾಡುತ್ತಿದ್ದಾರೆ ಹಾಗೂ ಯಾರೂ ಅವರ ವಿರುದ್ಧ ಮಾತನಾಡಲು ಸಿದ್ಧರಿಲ್ಲ.

 

*  ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕೆಂದು ನಿಮ್ಮ ಅಭಿಪ್ರಾಯವೇ ?

ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣ ಜನರಿಗಾಗಿರುವುದು ಹಾಗೂ ಜನರಿಗೆ ಮಾತನಾಡುವ ಎಲ್ಲಾ ಹಕ್ಕೂ ಇದೆ.