ಇನ್ನಷ್ಟು ಆಹಾರ ವಲಯ ಸ್ಥಾಪಿಸಲು ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರ ಸಂಘ ಪ್ರತಿಭಟನೆ

ಪಾಲಿಕೆ ಎದುರು ಪ್ರತಿಭಟಿಸಿದ ಬೀದಿ ಬದಿ ವ್ಯಾಪಾರಸ್ಥರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹಲವು ಕಡೆಗಳಲ್ಲಿ ಆಹಾರ ವಲಯ ರಚಿಸಲು ಒತ್ತಾಯಿಸಿ ಆಹಾರ ಪದಾರ್ಥ ಮಾರಾಟಗಾರರಿಂದ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖಂಡ ಸುನಿಲಕುಮಾರ್ ಬಜಾಲ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

“ಮಂಗಳೂರು ನಗರ ಪಾಲಿಕೆಯು ಪುರಭವನದ ಬಳಿಯಲ್ಲಿ ಈಗಾಗಲೇ ಆಹಾರ ವಲಯವನ್ನು ಸ್ಥಾಪಿಸಿದೆ. ಆದರೆ ಎಲ್ಲಾ ವ್ಯಾಪಾರಿಗಳನ್ನು ಇಲ್ಲೇ ತಂದು ಹಾಕಿ ಅವರಿಗೆ ವ್ಯಾಪಾರವಿಲ್ಲದಂತೆ ಮಾಡುವ ಷಡ್ಯಂತ್ರ, ಅವೈಜ್ಞಾನಿಕ ವ್ಯವಸ್ಥೆಯನ್ನು ಪಾಲಿಕೆ ಅಧಿಕಾರಿಗಳು ಅಳವಡಿಸಿ, ಬೀದಿ ಬದಿ ವ್ಯಾಪಾರಿಗಳ ಬದುಕನ್ನು ಬರ್ಬರ ಮಾಡಿದ್ದಾರೆ” ಎಂದವರು ಆಕ್ರೋಶ ವ್ಯಕ್ತಪಡಿಸಿದರು.

“ಎಲ್ಲಾ ವ್ಯಾಪಾರಿಗಳು ವ್ಯಾಪಾರ ಮಾಡಲು ಒಂದೇ ಕಡೆ ಸೇರಿದರೆ ಅಲ್ಲಿಗೆ ಬರುವ ಗ್ರಾಹಕರಾದರೂ ಯಾರು, ಎಷ್ಟು ಖರೀದಿ ಮಾಡುತ್ತಾರೆ” ಎಂದು ಬಜಾಲ್ ಪ್ರಶ್ನಿಸಿದರು.

“ಪುರಭವನದ ಬಳಿ ನಿರ್ಮಿಸಲಾಗಿರುವ ವೆಂಡಿಂಗ್ ಝೋನಿನಲ್ಲಿ ಈಗಾಗಲೇ 208 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅನುಮತಿ ನೀಡಿ ಕಾರ್ಡ್ ನೀಡಲಾಗಿದೆ. ಇನ್ನೂ 350 ಮಂದಿಗೆ ಕಾರ್ಡ್ ನೀಡಲು ಬಾಕಿ ಇದೆ. ಉಳಿದ 350 ಮಂದಿಗೂ ಕಾರ್ಡ್ ನೀಡಿ ಅವರು ಇದೇ ಜಾಗಕ್ಕೆ ಬಂದು ವ್ಯಾಪಾರ ಮಾಡಬೇಕಂತೆ. ಹೀಗಿರುವಾಗ ಇಷ್ಟೊಂದು ಜನ ಇಲ್ಲಿಗೆ ಬಂದರೆ ವ್ಯಾಪಾರ ಮಾಡಲು ಸಾಧ್ಯವಿದೆಯೇ” ಎಂದು ಬಜಾಲ್ ಪ್ರಶ್ನಿಸಿದರು.

“ಜ 16ರಂದು ಬೀದಿ ಬದಿ ವ್ಯಾಪಾರಸ್ಥರ ಮತ್ತು ಮಂಗಳೂರು ನಗರ ಪಾಲಿಕೆ ಅಧಿಕಾರಿಗಳ ಸಭೆ ನಡೆಸಲು ದಿನ ನಿರ್ಧರಿಸಲಾಗಿದ್ದು, ಅಂದು ಬೀದಿ ಬದಿ ವ್ಯಾಪಾರಸ್ಥರ ಸಮಸ್ಯೆ ಆಲಿಸಲಾಗುತ್ತಿದೆ. ಇಲ್ಲಿ ಎದುರಾಗುವ ಸಮಸ್ಯೆಗಳಿಗೆ ನೀವು ಉತ್ತರಿಸಬೇಕು” ಎಂದವರು ಆಗ್ರಹಿಸಿದರು.

“ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ನಾವೇ 9 ಕಡೆ ಜಾಗವನ್ನು ನಿಗದಿ ಮಾಡಿದ್ದೇವೆ. ಇಲ್ಲಿ ನಮಗೆ ಮಾರಾಟ ಮಾಡಲು ಅವಕಾಶ ನೀಡಿ” ಎಂದವರು ಆಗ್ರಹಿಸಿದರು.