ಬೀದಿಬದಿ ವ್ಯಾಪಾರಿಗಳಿಂದ ನಗರ ಪಾಲಿಕೆಗೆ ಮುತ್ತಿಗೆ

ಮಂಗಳೂರು ಪಾಲಿಕೆಗೆ ಮುತ್ತಿಗೆ ಹಾಕಿದ ಬೀದಿ ಬದಿ ವ್ಯಾಪಾರಿಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಪ್ರತ್ಯೇಕ ಬೀದಿಬದಿ ವ್ಯಾಪಾರಸ್ಥರ ವಲಯ ಎಂದು ನಿರ್ಮಿಸಿ ಕೊಡಲಾಗಿದ್ದರೂ ಬೀದಿ ಬದಿ ವ್ಯಾಪಾರಸ್ಥರು ಮಾತ್ರ ಎಲ್ಲೆಂದರಲ್ಲಿ ವ್ಯಾಪಾರ ಮಾಡುತ್ತಿದ್ದಾರೆಂದು ನಗರ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಇವರನ್ನು ಇತ್ತೀಚೆಗೆ ತೆರವುಗೊಳಿಸಿದ್ದರು.

ಆದರೆ ನಗರ ಪಾಲಿಕೆಯ ಕಾರ್ಯವೈಖರಿ ಖಂಡಿಸಿ ಬೀದಿ ಬದಿ ವ್ಯಾಪಾರಿಗಳು ಮಂಗಳೂರು ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಕೇವಲ ಕೆಲವರಿಗೆ ಮಾತ್ರ ಗುರುತು ಚೀಟಿ ನೀಡಿ ಉಳಿದವರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಎಲ್ಲರಿಗೂ ಸರಿಯಾದ ಸೂಕ್ತವ್ಯವಸ್ಥೆಯನ್ನು ಮಾಡಿದ ಬಳಿಕವೇ ನೂತನ ಕೇಂದ್ರದ ವ್ಯವಸ್ಥೆ ಸರಿಯಾಗುತ್ತದೆ ಎಂದು ಅದೇ ದಿನ ಆಡಳಿತಕ್ಕೆ ನಾವು ಮುನ್ನೆಚ್ಚರಿಕೆಯನ್ನೂ ನೀಡಿದ್ದೇವು. ಆದರೆ ಇಂದು ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಾಮಾಜಿಕ ಹೋರಾಟಗಾರ ಸುನಿಲಕುಮಾರ್ ಬಜಾಲ್ ನೇತೃತ್ವದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಿ ಮೇಯರ್ ಮತ್ತು ಆಯುಕ್ತರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.

ಒಂದು ಹಂತದಲ್ಲಿ ಪ್ರತಿಭಟನಾಕಾರರನ್ನು ಒಳಗೆ ಬಿಡಲು ಅವಕಾಶ ನೀಡದೇ ಇದ್ದಾಗ, ಪ್ರತಿಭಟನೆ ಉದ್ವಿಗ್ನ ಸ್ಥಿತಿ ತಲುಪಿತು. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಬಳಿಕ ಮೇಯರ್ ಹರಿನಾಥ್ ಬೀದಿ ಬದಿ ವ್ಯಾಪಾರಿಗಳನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ಮಾತುಕತೆ ನಡೆಸಿದರು. 2ನೇ ಹಂತದ ಗುರುತುಚೀಟಿಯನ್ನು ನೀಡದೇ ವಿನಾಕಾರಣ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದು ಸಲ್ಲದು ಎಂದು ಪ್ರತಿಭಟನಾಕಾರರು ಮೇಯರ್ ಹಾಗೂ ಆಯುಕ್ತರಿಗೆ ಮನವರಿಕೆ ಮಾಡಿದರು.