ಪ್ರತಿಭಟನೆಗೆ ಬೀದಿಬದಿ ವ್ಯಾಪಾರಿಗಳ ಸಿದ್ಧತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೀದಿ ಬದಿ ವ್ಯಾಪಾರವನ್ನು ಮಾಡಿಕೊಂಡು ತಮ್ಮ ಸಂಸಾರ ನಡೆಸುತ್ತಿರುವ ವ್ಯಾಪಾರಸ್ಥರಿಗೆ ಮಂಗಳೂರು ಮಹಾನಗರ ಪಾಲಿಕೆ ನಗರದ ಪುರಭವನದ ಹಿಂಭಾಗದ ಸಾಂಸ್ಕøತಿಕ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು `ಬೀದಿಬದಿ ವ್ಯಾಪಾರಿ ವಲಯ’ವನ್ನಾಗಿ ಮಾಡಿ, ಮಂಗಳೂರು ಮೇಯರ್ ಹರಿನಾಥ್ ಅವರು ಇದನ್ನು ಉದ್ಘಾಟಿಸಿ ಸೇವೆ ಲಭ್ಯವಾಗಿದೆ. ಆದರೆ ತಮ್ಮ ಸಮಸ್ಯೆ ಬಗೆಹರಿದೀತು ಎಂದು ಕೊಂಡ ಬೀದಿ ಬದಿ ವ್ಯಾಪಾರಿಗಳು ಇದೀಗ ಪ್ರತಿಭಟನೆಗೆ ಮುಂದಾಗಿದ್ದಾರೆ.

“ಇಲ್ಲಿ ಅನ್ಯ ರಾಜ್ಯ, ಜಿಲ್ಲೆ, ತಾಲೂಕಿನ ಮಂದಿಗೆ ಜಾಗವನ್ನು ಕೊಟ್ಟಿದ್ದಾರೆ. ಮಂಗಳೂರಿನ ಬೀದಿ ವ್ಯಾಪಾರಿಗಳನ್ನು ಬೀದಿ ಪಾಲು ಮಾಡಲಾಗಿದೆ. ನಾವಿನ್ನು ಎಲ್ಲಿಗೆ ಹೋಗಬೇಕು” ಎಂಬ ಪ್ರಶ್ನೆ ವ್ಯಾಪಾರಿಗಳದ್ದು. ಪ್ರತಿನಿತ್ಯವೂ ಆತಂಕ ಎದುರಿಸಿಕೊಂಡು ವ್ಯಾಪಾರ ಮಾಡುತ್ತಿದ್ದ ಮಂಗಳೂರಿನ ಬೀದಿ ಬದಿ ವ್ಯಾಪಾರಿಗಳು ಮತ್ತೆ ಅದೇ ಜಾಗಕ್ಕೆ ತೆರಳಿ ಆತಂಕ ಎದುರಿಸುತ್ತಾ ವ್ಯಾಪಾರ ಮಾಡುವ ಆತಂಕಕ್ಕೆ ಒಳಗಾಗಿದ್ದಾರೆ.

“ಮೊದಲು ನಮ್ಮೂರಿನ ಮಂದಿಗೆ, ವ್ಯಾಪಾರಿಗಳಿಗೆ ಜಾಗ ಕೊಡಬೇಕು. ಉಳಿದವರಿಗೆ ಮತ್ತೆ ನೀಡಲಿ. ಆದರೆ ಅಧಿಕಾರಿಗಳು ಕೇವಲ ಬಾಗಲಕೋಟೆ, ಹಾಸನ, ಮಹಾರಾಷ್ಟ್ರದಿಂದ ಬಂದ ವ್ಯಾಪಾರಿಗಳಿಗೆ ಜಾಗವನ್ನು ಕೊಟ್ಟಿದ್ದಾರೆ. ಇದು ಸರಿಯಲ್ಲ” ಎನ್ನುತ್ತಾರೆ ಬೀದಿ ಬದಿ ವ್ಯಾಪಾರಿಯಾಗಿರುವ ಅಬ್ದುಲ್ಲ ಎಂಬವರು.

“ಪುರಭವನ ಪಕ್ಕ ಜಾಗ ಇರುವುದು ಕೇವಲ 250 ಮಂದಿಗೆ ಮಾತ್ರ. ಆದರೆ ನಗರದಲ್ಲಿ ನಿಜಕ್ಕೂ 350ಕ್ಕೂ ಅಧಿಕ ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಇವರಿಗೆಲ್ಲಾ ಗುರುತಿನ ಚೀಟಿ ಇನ್ನೂ ನೀಡಿಲ್ಲ. ಜಾಗ ಪಡೆದುಕೊಂಡವರೂ ಅಲ್ಲಿ ಅಂಗಡಿ ಹಾಕಿಲ್ಲ” ಎಂದು ಬೀದಿ ಬದಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿನ ಎಲ್ಲಾ ವ್ಯಾಪಾರಿಗಳನ್ನು ಸೇರಿಸಿಕೊಂಡು ಅವರು ಪ್ರತಿಭಟನೆಗೆ ಮುಂದಾಗಿದ್ದು, ಶೀಘ್ರವೇ  ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿಭಟನೆ ನಡೆಯಲಿದೆ.