ನಗರದ ಬೀದಿ ವ್ಯಾಪಾರಿಗಳ ಪ್ರತ್ಯೇಕ ಸ್ಥಳಕ್ಕೆ ವ್ಯಾಪಾರಿಗಳೂ ಇಲ್ಲ, ಗ್ರಾಹಕರೂ ಇಲ್ಲ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯು ನಗರದ ಬೀದಿ ಬದಿ ವ್ಯಾಪಾರಿಗಳಿಗೆಂದು ಪುರಭವನದ ಸಮೀಪ ಪ್ರತ್ಯೇಕ ಸ್ಥಳ ಗುರುತಿಸಿದ್ದು, ಈ ಜಾಗವು ಅತ್ತ ವ್ಯಾಪಾರಿಗಳೂ ಇಲ್ಲದೆ ಇತ್ತ ಗ್ರಾಹಕರೂ ಇಲ್ಲದೆ  ಬಿಕೋ ಎನ್ನುತ್ತಿದೆ.

ಪ್ರತ್ಯೇಕ ವ್ಯಾಪಾರ ಸ್ಥಳವನ್ನು ಉದ್ಘಾಟಿಸಿ ತಿಂಗಳು ಸಮೀಪಿಸುತ್ತಿದ್ದರೂ ಇಲ್ಲಿ ಯಾವುದೇ ವ್ಯಾಪಾರಿಗಳು ವ್ಯಾಪಾರದಲ್ಲಿ ತೊಡಗಿರುವುದು ಕಾಣುತ್ತಿಲ್ಲ. ಬೀದಿ ಬದಿ ವ್ಯಾಪಾರಿಗಳ ಆರ್ಥಿಕತೆಯ ಮಹತ್ವವನ್ನು ಗುರುತಿಸಿದ ಸುಪ್ರೀಂ ಕೋರ್ಟು 2011ರಲ್ಲಿ ವಸತಿ ಮತ್ತು ನಗರ ಬಡತನ ನಿವಾರಣೆ ಸಚಿವಾಲಯವು “ಬೀದಿ ಬದಿ ವ್ಯಾಪಾರಿಗಳನ್ನು ಪೊಲೀಸರು ಮತ್ತು ಪೌರ ಅಧಿಕಾರಿಗಳ ದೌರ್ಜನ್ಯದಿಂದ ರಕ್ಷಿಸುವ ನಿಟ್ಟಿನಲ್ಲಿ ಪ್ರತ್ಯೇಕ ವ್ಯಾಪಾರ ವಲಯವನ್ನು ಗುರುತಿಸಿಕೊಡಬೇಕು” ಎಂದು ಸೂಚಿಸಿತ್ತು.

ನಂತರ ಸಂಸತ್ತು ಬೀದಿ ವ್ಯಾಪಾರಿಗಳ ಮಸೂದೆಯನ್ನು 2012ರಲ್ಲಿ ಪಾಸು ಮಾಡಿತ್ತು. ಈ ಕಾನೂನು ಪಟ್ಟಣ ವ್ಯಾಪಾರ ಸಮಿತಿಯಿಂದ ಪ್ರಮಾಣ ಪತ್ರ ಪಡೆದಿರುವ ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಭದ್ರತೆ ಮತ್ತು ರಕ್ಷಣೆ ನೀಡುತ್ತದೆ.

“ಮನಪಾ ಸುಮಾರು 210 ಬೀದಿ ಬದಿ ವ್ಯಾಪಾರಿಗಳನ್ನು ಗುರುತಿಸಿದ್ದು, ಅವರ ನೋಂದಾವಣೆ ಬಳಿಕ ಗುರುತಿನ ಚೀಟಿ ನೀಡಿದೆ. ಕೇಂದ್ರ ಮಾರುಕಟ್ಟೆ ಸಮೀಪದಲ್ಲಿರುವುದರಿಂದ ಬೀದಿ ವ್ಯಾಪಾರಿಗಳಿಗೆ ಇಲ್ಲಿ ವ್ಯಾಪಾರ ಮಾಡುವುದಕ್ಕೆ ಯಾವುದೇ ತೊಂದರೆ ಇಲ್ಲ. ಪ್ರತ್ಯೇಕ ಸ್ಥಳ ಗುರುತಿಸಿರುವುದರಿಂದ ಫುಟ್ಪಾಗಳನ್ನು ಆಕ್ರಮಿಸಿಕೊಂಡು ವ್ಯಾಪಾರ ನಡೆಸುವ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಇಳಿಕೆಯಾಗಲಿದೆ. ಇದು ಪಾದಚಾರಿಗಳಿಗೆ ಅನುಕೂಲವಾಗಲಿದೆ” ಎಂದು ಮನಪಾ ಆಯುಕ್ತ ಮಹಮ್ಮದ್ ನಝೀರ್ ಹೇಳಿದ್ದಾರೆ.

ಸೌಲಭ್ಯಗಳಿಲ್ಲ

“ಬೀದಿ ಬದಿ ವ್ಯಾಪಾರಿಗಳಿಗೆಂದು ಗುರುತಿಸಲಾಗಿರುವ ಪ್ರತ್ಯೇಕ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಶೌಚಾಲಯ, ಕುಡಿಯುವ ನೀರು, ಸಮರ್ಪಕ ಬೆಳಕಿನ ವ್ಯವಸ್ಥೆಯೂ ಇಲ್ಲ. ಜೊತೆಗೆ ಈ ಸ್ಥಳದ ಸುತ್ತ ಕಂಪೌಂಡು ಗೋಡೆ ಕಟ್ಟಲಾಗಿದೆ. ಇದನ್ನು ತೆಗೆಯುವಂತೆ ಮನಪಾ ಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರೂ ಇದುವರೆಗೆ ಏನೂ ಮಾಡಿಲ್ಲ, ಕೆಲವು ವ್ಯಾಪಾರಿಗಳು ಇಲ್ಲಿ ವ್ಯಾಪಾರಕ್ಕೆ ಕುಳಿತಿದ್ದರೂ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಅಗತ್ಯ ಸೌಲಭ್ಯಗಳನ್ನು ಪೂರೈಸಿದರೆ ಮನಪಾ ಕಾರ್ಯ ಯಶಸ್ವಿಯಾಗಬಹುದು” ಎಂದು ಸಿಐಟಿಯು.ನ ವಸಂತ ಆಚಾರಿ ಹೇಳಿದ್ದಾರೆ.