ಯಡ್ಡಿ-ಈಶ್ವರಪ್ಪ ಬೆಂಬಲಿಗರ ಬೀದಿ ಕಾಳಗ

 

ಶಿವಮೊಗ್ಗ : ಜಿಲ್ಲಾ ಬಿಜೆಪಿ ಘಟಕದಲ್ಲಿನ ಒಳಜಗಳ ತಾರಕಕ್ಕೇರಿದ್ದು ಮಂಗಳವಾರ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಹಾಗೂ ಪರಿಷತ್ತಿನ ವಿಪಕ್ಷ ನಾಯಕ ಕೆ ಎಸ್ ಈಶ್ವರಪ್ಪ ಬೆಂಬಲಿಗರು ಪಕ್ಷದ ಕಚೇರಿಯೆದುರು ವಸ್ತುಶಃ ಬೀದಿ ಕಾಳಗಕ್ಕಿಳಿದ ಪರಿಣಾಮ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.

fight

ಸೋಮವಾರ ನಡೆದ ಪತ್ರಿಕಾಗೋಷ್ಠಿಯೊಂದರಿಂದ ಹೊರ ನಡೆದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್ ರುದ್ರೇಗೌಡ ಅವರಿಗೆ ಯಡ್ಡಿಯೂರಪ್ಪ ಬೆಂಬಲಿಗರ ಬಣವೊಂದು ಮನವಿಯೊಂದನ್ನು ಸಲ್ಲಿಸಿದ್ದೇ ಎರಡೂ ಗುಂಪುಗಳ ನಡುವೆ ಬಿಸಿಯೇರಿದ ವಾಗ್ವಾದಕ್ಕೆ ಕಾರಣವಾಗಿತ್ತು. ಈಶ್ವರಪ್ಪ ಬೆಂಬಲಿಗರಾದ ಗಿರೀಶ್ ಪಟೇಲ್, ಎಸ್ ಎನ್ ಚೆನ್ನಬಸಪ್ಪ, ಎಸ್ ದತ್ತಾತ್ರಿ, ಜ್ಞಾನೇಶ್ವರ್ ಹಾಗೂ ನಾಗರಾಜ್ ಆವರನ್ನು ಪಕ್ಷದಿಂದ ಉಚ್ಛಾಟಿಸಬೇಕೆಂದು ಯಡ್ಡಿಯೂರಪ್ಪ ಬೆಂಬಲಿಗರು  ಆಗ್ರಹಿಸಿದ್ದೇ ತಡ ಎರಡೂ ಕಡೆಗಳ ಕಾರ್ಯಕರ್ತರು ಕೈಕೈ ಮಿಸಲಾಯಿಸುವ ಹಂತಕ್ಕೆ ಹೋದರು. ಪಕ್ಷದ ಕಚೇರಿಯೆದುರು ನೂರಾರು ಜನ ಕೂಡ ಜಮಾಯಿಸಿದ್ದರು. ಎರಡೂ ಕಡೆಗಳ ಕೆಲವು ಕಾರ್ಯಕರ್ತರಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.

ಕೊನೆಗೆ ಪೊಲೀಸರು ಹಾಗೂ ಪಕ್ಷದ ಇತರ ನಾಯಕರು ಅಲ್ಲಿಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಸೋಮವಾರದ ಪತ್ರಿಕಾಗೋಷ್ಠಿಯಿಂದ ಹೊರ ನಡೆದಿದ್ದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ ಎನ್ ಚೆನ್ನಬಸಪ್ಪ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಮನವಿಯಲ್ಲಿ ದೂರಿದಂತೆ ತಾನು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದರು. ತನ್ನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದರೆ ಪಕ್ಷ ತ್ಯಜಿಸುವುದಾಗಿಯೂ ಅವರು ತಿಳಿಸಿದರು.