ನಾಯಿಗಳ ದಾಳಿಗೆ 5ರ ಬಾಲಕಿ ಬಲಿ

ಕಲಬುರ್ಗಿ : ಕಮಲಾಪುರ ಸಮೀಪದ ಕಲಮಂಡರಗಿ ಬಂಡೆನಕೆರೆ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ಬೀದಿ ನಾಯಿಗಳ ಗುಂಪೊಂದರ ದಾಳಿಯಲ್ಲಿ ಐದು ವರ್ಷದ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಅರವಿಂದ್ ಜಾಧವ್ ಮತ್ತು ರೇಣಕಾ ದಂಪತಿಯ ಪುತ್ರಿ ನಂದಿನಿ ದಾರುಣವಾಗಿ ಸಾವನ್ನಪ್ಪಿದವಳು. ಜಾಧವ್  ದುಬೈಯಲ್ಲಿ ಉದ್ಯೋಗಿಯಾಗಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 12.30ಕ್ಕೆ ನಂದಿನಿ ಮನೆಯಲ್ಲಿ ಮಲಗಿದ್ದ ವೇಳೆ ರೇಣುಕಾ ಹತ್ತಿರದ ಟ್ಯಾಂಕ್ ಒಂದರಿಂದ ನೀರು ತರಲು ಹೋಗಿದ್ದರು. ಹಿಂದೆ ಬಂದಾಗ ಪುತ್ರಿ ಮನೆಯಲ್ಲಿರಲಿಲ್ಲ. ಹುಡುಕಾಡಿದಾಗ ಬೀದಿ ನಾಯಿಗಳುಬಾಲಕಿಯನ್ನು ಕಚ್ಚುತ್ತಿರುವುದನ್ನು ನೋಡಿ ಅವುಗಳನ್ನು ದೂರ  ಓಡಿಸಿ ಮಗಳು ಸತ್ತಿದ್ದಾಳೆಂಬ ಅರಿವಿಲ್ಲದೆ ಮನೆಗೆ ಕರೆದುಕೊಂಡು ಬಂದಿದ್ದರು. ಕುತ್ತಿಗೆ ಹಾಗೂ ತಲೆಗಾದ ತೀವ್ರ ಗಾಯಗಳಿಂದಾಗಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.

ರೇಣುಕಾ ನೀರು ತರಲು ಹೋದಾಗ ಎಚ್ಚರಗೊಂಡ ಬಾಲಕಿ ತಾಯಿಯನ್ನು ಹುಡುಕಿಕೊಂಡು ಬಂದಾಗ ಬೀದಿ ನಾಯಿಗಳ ದಾಳಿಗೊಳಗಾಗಿದ್ದಳೆಂದು ಶಂಕಿಸಲಾಗಿದೆ. ಅವರಿರುವ ಗ್ರಾಮದಲ್ಲಿ ಕೇವಲ ರಾತ್ರಿ ಹೊತ್ತು ನೀರು ಸರಬರಾಜಾಗುತ್ತದೆ.