ಬೀದಿನಾಯಿಗಳಿಗೂ ಬದುಕುವ ಹಕ್ಕಿದೆ ಎಂದ ಸುಪ್ರಿಂ ಕೋರ್ಟ್

ನವದೆಹಲಿ: ಬೀದಿಯಲ್ಲಿ ತೆರಳುವ ವೇಳೆ ನಾಯಿಯೊಂದು ಅಟ್ಟಾಡಿಸಿಕೊಂಡು ಬಂದ್ರೆ ನೀವು ಕಲ್ಲು ಹೊಡೆದು ಅದನ್ನು ಓಡಿಸುವಂತಿಲ್ಲ. ಯಾಕೆಂದರೆ ಬೀದಿನಾಯಿಗೂ ಬದುಕುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಬೀದಿನಾಯಿಗಳನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದು ಕೋರಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೀಪಕ್ ಮಿಶ್ರಾ ಮತ್ತು ಆರ್ ಭಾನುಮತಿ ಅವರ ನ್ಯಾಯಪೀಠ, ನಾಯಿಗಳ ಹಾವಳಿ ಅತಿಯಾದಾಗ ಅವನ್ನು ಕೊಲ್ಲುವ ವಿಚಾರ ಸಹಮತದ್ದೇ ಆದರೂ ಇದಕ್ಕೊಂದು ಸಮತೋಲನವಿರಬೇಕು ಎಂದು ಅಭಿಪ್ರಾಯಪಟ್ಟಿದೆ.

ಭಾರತದಾದ್ಯಂತ ಇರುವ ಬೀದಿ ನಾಯಿಗಳನ್ನು ನಿರ್ಮೂಲನೆ ಮಾಡಬೇಕೆಂದು ಅರ್ಜಿದಾರರು ಕೋರಿಕೊಂಡಾಗ ಪ್ರತಿಕ್ರಿಯೆ ನೀಡಿರುವ ಪೀಠ, “ಬೀದಿನಾಯಿಗಳನ್ನು ಯಾರೂ ಕೂಡಾ ಸಂಪೂರ್ಣವಾಗಿ ಸಂಹಾರ ಮಾಡಲಾಗದು. ಅವಕ್ಕೂ ಬದುಕುವ ಹಕ್ಕಿದೆ” ಎಂದು ಅಭಿಪ್ರಾಯಪಟ್ಟಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‍ಜಿ) ಪಿಂಕಿ ಆನಂದ್ ಅವರು ಕೂಡಾ ನಾಯಿಗಳಿಗೂ ಬದುಕುವ ಹಕ್ಕಿದೆ ಎಂದು ಸಹಮತ ವ್ಯಕ್ತಪಡಿಸಿದರು.