ಕಾರ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಬೀದಿನಾಯಿ ಕಾಟ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಕಾರ್ಕಳ ಪುರಸಭೆ ವತಿಯಿಂದ ಬೀದಿನಾಯಿಗಳ ಸಂತಾನಹರಣ ಪ್ರಕ್ರಿಯೆ ನಡೆಸಿದ ಹೊರತಾಗಿಯೂ ಬೀದಿನಾಯಿ ಹಾವಳಿ ತಾಲೂಕಿನ ವಿವಿಧ ಕಡೆಗಳಲ್ಲಿ ಹೆಚ್ಚಾಗಿದೆ. 2016ರಲ್ಲಿ ಬೀದಿನಾಯಿ ಕಚ್ಚಿದ 700 ಪ್ರಕರಣಗಳು ದಾಖಲಾಗಿವೆ. ಇಷ್ಟೆಲ್ಲಾ ಬೀದಿನಾಯಿ ಹಾವಳಿ ಇದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಏನೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಾರ್ಕಳದಲ್ಲಿ ಜನವರಿ 2016ರಿಂದ ನವೆಂಬರ್ 2016ರವರೆಗೆ 500ಕ್ಕೂ ಹೆಚ್ಚು ಮಂದಿಗೆ ನಾಯಿಗಳು ಕಚ್ಚಿವೆ ಎಂದು ಆರೋಗ್ಯ ಇಲಾಖಾಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ. ನವೆಂಬರ್ ತಿಂಗಳೊಂದರಲ್ಲೇ ಅತೀ ಹೆಚ್ಚು 58 ಮಂದಿಗೆ ಬೀದಿನಾಯಿಗಳು ಕಚ್ಚಿವೆ. ಇವರಲ್ಲಿ 32 ಗಂಡಸರು ಮತ್ತು 26 ಮಂದಿ ಮಹಿಳೆಯರಿಗೆ ಕಚ್ಚಿದೆ. 700 ಪ್ರಕರಣಗಳು ಕಾರ್ಕಳವೊಂದರಲ್ಲೇ ದಾಖಲಾಗಿದೆ. ಅದೂ ಕೂಡಾ 305 ಮಂದಿ ನಗರವಾಸಿಗಳಿಗೆ ನಾಯಿ ಕಚ್ಚಿ ದಾಖಲಾಗಿರುವುದು ವಿಶೇಷ.

ಬೈಲೂರು, ಯರ್ಲಪ್ಪಾಡಿ, ನೀರೆ, ಸೂಡಾ, ನಂದಳಿಕೆ, ಬೆಳ್ಮಣ್ಣು, ಹೆಬ್ರಿ ಮತ್ತು ಚಾರದಲ್ಲಿ ಅತೀ ಹೆಚ್ಚು ಬೀದಿನಾಯಿಗಳು ಕಚ್ಚಿದ ಪ್ರಕರಣಗಳು ದಾಖಲಾಗಿವೆ. ಬೀದಿ ನಾಯಿಗಳ ಕಾಟಕ್ಕೆ ಕಡಿವಾಣ ಹಾಕುವಂತೆ ಕೋರಿ ನಾನು ಹಲವು ಬಾರಿ ಜಿಲ್ಲಾ ಪಂಚಾಯತ್ ಸಭೆಯಲ್ಲೂ ದನಿ ಎತ್ತಿದ್ದೇನೆ ಎಂದು ಜಿ ಪಂ ಸದಸ್ಯ ಸುಮಿತ್ ಶೆಟ್ಟಿ ಹೇಳಿದ್ದಾರೆ.