ಬಂಟ್ವಾಳದ ವಿವಿಧೆಡೆ ಹುಚ್ಚು ನಾಯಿ ಕಾಟ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ತಾಲೂಕಿನ ಅಮ್ಮುಂಜೆ ಗ್ರಾಮದ ಕಲಾಯಿ ಹಾಗೂ ಮಲ್ಲೂರು ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಹುಚ್ಚು ನಾಯಿಗಳ ಕಾಟ ಮಿತಿ ಮೀರಿದ್ದು, ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಹಾಗೂ ಶನಿವಾರ ಇಬ್ಬರು ಮಕ್ಕಳ ಸಹಿತ ಒಟ್ಟು 6 ಮಂದಿಗೆ ಹಾಗೂ 5 ಜಾನುವಾರುಗಳ ಮೇಲೆ ದಾಳಿ ಮಾಡಿರುವ ಹುಚ್ಚು ನಾಯಿಗಳು ಗಾಯಗೊಳಿಸಿದೆ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಇಲ್ಲಿನ ಶಂಕರ್ ಎಂಬವರ ಪುತ್ರ ತಮ್ಮು, ಮೋನಪ್ಪ ಪೂಜಾರಿ ಪುತ್ರಿ ಅನಿತ, ಸಫಿಯಾ ಎಂಬವರ ಸಹಿತ ನಾಲ್ಕು ಮಂದಿಗೆ ಹಾಗೂ ಶನಿವಾರ ಇಬ್ಬರು ಶಾಲಾ ಮಕ್ಕಳು ಹುಚ್ಚು ನಾಯಿ ಕಡಿತಗೊಳಗಾಗಿದ್ದು, ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ ಬಶೀರ್, ರಜಿತ್ ಶೆಟ್ಟಿ, ಹನೀಫ್ ಎಂಬವರಿಗೆ ಸೇರಿದ ಜಾನುವಾರುಗಳಿಗೆ ಕೂಡಾ ಈ ಹುಚ್ಚು ನಾಯಿಗಳು ಕಚ್ಚಿ ಗಾಯಗೊಳಿಸಿದೆ.

ಅಮ್ಮುಂಜೆ ಗ್ರಾಮದ ಕಲಾಯಿ ಮತ್ತು ಮಲ್ಲೂರು ಪರಿಸರದಲ್ಲಿ ಸುಮಾರು 4ರಿಂದ 5 ಹುಚ್ಚು ನಾಯಿಗಳು ಓಡಾಡುತ್ತಿದ್ದು ಕಂಡವರ ಮೈಮೇಲೆ ಎರಗಲು ಪ್ರಯತ್ನಿಸುತ್ತಿದೆ. ಇದರಿಂದ ಗ್ರಾಮಸ್ಥರು ಹಾಗೂ ಮಕ್ಕಳು ರಸ್ತೆಗಿಳಿಯಲು ಭಯ ಪಡುವಂತಾಗಿದೆ. ಇವುಗಳ ಪೈಕಿ ಒಂದು ನಾಯಿಯನ್ನು ಈಗಾಗಲೇ ಕೊಲ್ಲಲಾಗಿದೆ ಎಂದಿರುವ ಸಾರ್ವಜನಿಕರು ಹುಚ್ಚು ನಾಯಿ ಹಾವಳಿಯ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿಗೆ ದೂರು ನೀಡಲಾಗಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.