ರಾತ್ರಿ ಮನೆಯ ಕಾಲಿಂಗ್ ಬೆಲ್ ಒತ್ತಿದ ಆಗಂತುಕರು

ನಮ್ಮ ಪ್ರತಿನಿಧಿ ವರದಿ

ಸುಬ್ರಹ್ಮಣ್ಯ : ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾದ ಕಲ್ಮಕಾರು ಎಂಬ ಗ್ರಾಮದ ಮನೆಯೊಂದರ ಕಾಲಿಂಗ್ ಬೆಲ್ ಶನಿವಾರ  ಮಧ್ಯ ರಾತ್ರಿಯ ಸುಮಾರಿಗೆ ಯಾರೋ ಆಗಂತುಕರು ಒತ್ತಿದ ಪ್ರಕರಣ ಈ ಭಾಗದ ಜನತೆಯಲ್ಲಿ ನಕ್ಸಲರ ಭಯ ಮೂಡಿಸಿದೆ.

ಘಟನೆ ನಡೆದಾಗ ಕೊಮ್ಮೆಮನೆ ನಿವಾಸಿ ಪದ್ಮಾವತಿ ಹಾಗೂ ಅವರ ಪುತ್ರ ಸತೀಶ್ ಮನೆಯಲ್ಲಿ ಮಲಗಿದ್ದರು. ಕಾಲಿಂಗ್ ಬೆಲ್ ಸದ್ದು ಕೇಳಿ ಯಾರಿರಬಹುದೆಂದು ಇಬ್ಬರೂ ಯೋಚಿಸುತ್ತಿದ್ದಾಗ ಮತ್ತೆ ಎರಡು ಬಾರಿ ಬೆಲ್ ಆಗಂತುಕರು ಒತ್ತಿದ್ದು ಯಾರು ಎಂದು ಕೇಳಿದ ಪ್ರಶ್ನೆಗೆ ಪ್ರತ್ಯುತ್ತರ ದೊರೆತಿರಲಿಲ್ಲ. ಆ ಸಮಯ ವಿದ್ಯುತ್ ಕೂಡ ಕೈಕೊಟ್ಟಿದ್ದರಿಂದ ತಾಯಿ ಮಗ ಇಬ್ಬರಿಗೂ ಆತಂಕ ಕಾಡಿತ್ತು. ನಂತರ

ಸತೀಶ್ ಅವರು ಅಕ್ಕಪಕ್ಕದ ಮನೆಯವಿರಗೆ ಕರೆ ಮಾಡಿದ್ದು ಅವರೆಲ್ಲ ಸೇರಿ ಸುತ್ತಲಿನ ಪ್ರದೇಶದಲ್ಲಿ ಹುಡುಕಾಡಿದ್ದರೂ ಯಾವುದೇ ಸುಳಿವು ದೊರೆತಿಲ್ಲ. ಆಗಂತುಕರು ಬಂದಿದ್ದಾಗ ಮನೆಯ ನಾಯಿಯೂ ಬೊಗಳಿರಲಿಲ್ಲ, ಪರೀಕ್ಷಿಸಿದಾಗ ಒಣ ಮೀನಿನ ತುಂಡುಗಳು ಪತ್ತೆಯಾಗಿದ್ದು ಇವುಗಳನ್ನು ನಾಯಿಗಳಿಗೆ ನೀಡಿ ಅವುಗಳು  ಬೊಗಳದಂತೆ ಆಗಂತುಕರು ಎಚ್ಚರಿಕೆ ವಹಿಸಿರಬಹುದೆಂದು ಶಂಕಿಸಲಾಗಿದೆ. ಆದರೆ ಘಟನೆ ಸಂದರ್ಭ  ನೆರೆಮನೆಯವರ ನಾಯಿಗಳು ಬೊಗಳಿದ್ದವು ಎನ್ನಲಾಗಿದೆ. ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು  ಮನೆ ಪಕ್ಕ ಶೂ ಹೆಜ್ಜೆ ಗುರುತುಗಳು ಕಂಡುಬಂದಿವೆ.

ಈ ಮನೆ ಕಡಮಕಲ್ಲು ಮೀಸಲು ಅರಣ್ಯ ಪ್ರದೇಶದ ಸಮೀಪವೇ ಇರುವುದರಿಂದ ಬಂದಿದ್ದವರು ನಕ್ಸರರಾಗಿದ್ದರೂ ಅವರು ಅರಣ್ಯದಲ್ಲಿ ಮರೆಯಾಗಿರುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ಸಂಪಾಜೆಯಲ್ಲಿ ಕೆಲ ಶಂಕಿತ ನಕ್ಸಲರು ಕೆಲ ಮನೆಗಳಿಗೆ ಭೇಟಿ ನೀಡಿದ ಪ್ರಕರಣ ವರದಿಯಾಗಿತ್ತು.

 

 

 

LEAVE A REPLY