ಬಂಗ್ರಕೂಳೂರಿನಲ್ಲಿ ಮಳೆ ನೀರು, ಹರಿಯುವ ತೋಡು ಅತಿಕ್ರಮಣ

ಅತಿಕ್ರಮಣಗೊಂಡಿರುವ ತೋಡು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೊಟ್ಟಾರ ಚೌಕಿ, ಕೂಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ಮುಂಬರುವ ದಿನಗಳಲ್ಲಿ ಪ್ರವಾಹದಂತಹ ದುಃಸ್ಥಿತಿಯನ್ನು ಎದುರಿಸುವ ಭೀತಿಯಲ್ಲಿದ್ದಾರೆ. ಇಲ್ಲಿ ಅಸ್ಥಿತ್ವದಲ್ಲಿದ್ದ ತೋಡನ್ನು ಬಂಗ್ರ ಕೂಳೂರಿನ ಹೋಟೆಲ್ ಮಾಲಕರೊಬ್ಬರು ಅತಿಕ್ರಮಿಸಿಕೊಂಡಿರುವುದೇ ಇದಕ್ಕೆ ಕಾರಣ.

ಸದ್ಯ ಹೋಟೆಲ್ ಮಾಲಕ ಇಲ್ಲಿ ಮಣ್ಣು ಹಾಕಿ ತೋಡುಗಳನ್ನು ಮುಚ್ಚಿದ್ದಾರೆ, ಮುಂಬರುವ ದಿನಗಳಲ್ಲಿ ಇಲ್ಲಿ ಕಟ್ಟಡ ಕೂಡ ನಿರ್ಮಿಸಬಹುದು ಎಂಬುದು ಸ್ಥಳೀಯರ ಆತಂಕ.

ಈ ಹೋಟೆಲ್ ಮಾಲಕ ಬಂಗ್ರ ಕೂಳೂರಿನಲ್ಲಿ ಸುಮಾರು 1 ಕಿ ಮೀ ಉದ್ದದ ಮಳೆನೀರು ಹರಿಯುವ ತೋಡನ್ನು ಮುಚ್ಚಿದ್ದಾರೆ. ಇದರಿಂದ ಕೂಳೂರು, ರಾಯಿಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದು ಬರುವ ಮಳೆನೀರು ಈ ಪ್ರದೇಶದಲ್ಲಿ ಬ್ಲಾಕ್ ಆಗಲಿದೆ. ಈ ತೋಡು ಶಾಂತನಗರ, ಕಾವೂರು ಮತ್ತು ಆಕಾಶಭವನದಿಂದ ಹರಿದು ಬರುವ ತೋಡಿಗೆ ಸೇರಿ ನಂತರ ನೇತ್ರಾವತಿ ನದಿಯನ್ನು ಸೇರುತ್ತದೆ.

ಕಟ್ಟಡ ನಿರ್ಮಾಪಕರು ಜೆಸಿಬಿಗಳನ್ನು ಬಳಸಿ ಈ ತೋಡುಗಳ ಮೇಲೆ ಮಣ್ಣುಮುಚ್ಚಿದ್ದಾರೆ. ಸುಮಾರು 50 ಮೀಟರ್ ನೀರಿನ ತೋಡು ನೆಲ ಸಮವಾಗಿದೆ. ದುರಾದೃಷ್ಟವೆಂದರೆ ಪಾಲಿಕೆಯವರು ಈ ಕೃತ್ಯವನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಮುಂಬರುವ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗರು ದೊಡ್ಡ ಕಷ್ಟವನ್ನು ಎದುರಿಸುವುದರಲ್ಲಿ ಸಂಶಯವಿಲ್ಲ ಎಂದು ಕಾವೂರು ನಿವಾಸಿಗಳು ಹೇಳಿದ್ದಾರೆ.

ಈ ಹೋಟೆಲ್ ಮಾಲಕ ಕಳೆದ ವರ್ಷವೇ ತೋಡು ಮುಚ್ಚಲು ಯತ್ನಿಸಿದ್ದರು. ನಂತರ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಆದೇಶದಂತೆ ಸರ್ವೇಯರುಗಳು ಮತ್ತು ಮಂಗಳೂರು ನಗರಪಾಲಿಕೆ ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ ಈ ಭೇಟಿಯ ಬಳಿಕ ಯಾವುದೇ ಕ್ರಮಗಳನ್ನು ಕೈಗೊಂಡಂತೆ ಕಂಡುಬಂದಿಲ್ಲ ಎಂದು ಪಂಜಿಮೊಗರು ನಿವಾಸಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಪರಿಹಾರ ನೀಡುವಂತೆ ಕಾರ್ಪೊರೇಟರ್ ಹಾಗೂ ಡಿ ವೈ ಎಫೈ ಅಧ್ಯಕ್ಷ ದಯಾನಂದ ಶೆಟ್ಟಿ ಡಿ 7ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ಕೋರಿದ್ದಾರೆ.

ಇದೇ ವೇಳೆ ಮೇಯರ್ ಹರಿನಾಥ್ ಮತ್ತು ಮನಪಾ ಆಯುಕ್ತ ಮಹಮ್ಮದ್ ನಝೀರ್ ಪ್ರಕರಣ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದು, ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.