ಈಗಲೂ ದೇಶ ಮುನ್ನಡೆಸುವ ಸಾಮಥ್ರ್ಯವಿದೆ : ದೇವೇಗೌಡ

ಮೈಸೂರು : “ಪ್ರಧಾನಿಯಾಗಿ ನಾನು, ದೇಶ ಎದುರಿಸುತ್ತಿದ್ದ ಹಲವು ಸಂಕೀರ್ಣ ಸಮಸ್ಯೆಯನ್ನು ಸಮಾಧಾನಕವಾಗಿ ಬಗೆಹರಿಸಿದ್ದೆ. ಜಮ್ಮು-ಕಾಶ್ಮೀರ ಸಮಸ್ಯೆ ಬಗೆಹರಿಸಲು ನಾನು ಪ್ರತ್ಯೇಕತಾವಾದಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೆ. ಆದರೆ, ಅನಿರೀಕ್ಷಿತವಾಗಿ ಪ್ರಧಾನಿಯಾಗಿದ್ದ ನನ್ನೊಂದಿಗಿದ್ದ ಮಂದಿ, ಇಂದು ಜೊತೆಯಲ್ಲಿಲ್ಲ. ಏನೇ ಇದ್ದರೂ ನಾನು ಈಗಲೂ ದೇಶ ಮುನ್ನಡೆಸಲು ಶಕ್ತನಾಗಿದ್ದೇನೆ” ಎಂದು ಮಾಜಿ ಪ್ರಧಾನಿ ದೇವೇಗೌಡ ಬಡಾಯಿ ಕೊಚ್ಚಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರ ಹುರಿಯತ್ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿ ಪಾಲ್ಗೊಂಡಿದ್ದ ಮೈಸೂರು ಸಮಾರಂಭವೊಂದರಲ್ಲಿ ಮಾತನಾಡಿದ ದೇವೇಗೌಡ, “ನಾನು ಕಳೆದ 50 ವರ್ಷಗಳಿಂದ ರಾಜಕೀಯದಲ್ಲಿ ಹೋರಾಟ ಬದುಕಿನಲ್ಲಿದ್ದೇನೆ. ನಾನೀಗಲೂ ಕರ್ನಾಟಕದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಹೋರಾಡುತ್ತಿದ್ದೇನೆ. ಹಿಂದೆ ನನಗೆ ನೈತಿಕ ಬೆಂಬಲ ನೀಡಿದವರು ಇಂದು ನನ್ನೊಂದಿಗಿಲ್ಲ. ಆದರೂ ನನ್ನ ಹೋರಾಟ ನಿಂತಿಲ್ಲ” ಎಂದರು.

“ನೋಟು ನಿಷೇಧಕ್ಕೆ ಬಿಜೆಪಿಗೆ ಜನರು ಸೂಕ್ತ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಈ ದೇಶದ ಜನರು ಸಮ್ಮನಿದ್ದರು ಮತ್ತು ಸರಿಯಾದ ಸಮಯದಲ್ಲಿ ಆಡಳಿತ ಪಕ್ಷಕ್ಕೆ ಬುದ್ಧಿ ಕಲಿಸಿದ್ದರು” ಎಂದು ಜೆಡಿಎಸ್ ವರಿಷ್ಠ ಮುಖಂಡ ಹೇಳಿದರು. ಈ ವೇಳೆ ತಾನು ಶೀಘ್ರವೇ ಜೆಡಿಎಸ್ ಸೇರಿಕೊಳ್ಳಲಿದ್ದೇನೆಂದು ಸಿ ಎಂ ಇಬ್ರಾಹಿಂ ತಿಳಿಸಿದರು. ವೇದಿಕೆಯಲ್ಲಿ ಇಬ್ರಾಹಿಂ ಮತ್ತು ದೇವೇಗೌಡ ಪರಸ್ಪರ ಹೊಗಳಿಕೊಂಡರು.