ಪೊಲೀಸ್ ಠಾಣೆಗಳ ಎದುರುಗಡೆ ನಿಲ್ಲಿಸಿದ್ದ , ವಶಪಡಿಸಿಕೊಂಡ ವಾಹನ ತೆರವಿಗೆ ಕ್ರಮ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಾರ್ವಜನಿಕ ಹಿತದೃಷ್ಟಿಯಿಂದ ನಗರ ಪೊಲೀಸ್ ಠಾಣೆಗಳ ಎದುರುಗಡೆ ಫುಟ್ಪಾತುಗಳಲ್ಲಿ ಪಾರ್ಕ್ ಮಾಡಲಾಗಿರುವ ವಶಪಡಿಸಿಕೊಂಡ ವಾಹನಗಳನ್ನು ತೆರವುಗೊಳಿಸುವ ಕ್ರಮಗಳನ್ನು ನಗರ ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಕೈಗೊಂಡಿದ್ದಾರೆ.

ಮೊನ್ನೆ ನಡೆದ ವಾರದ ಫೋನ್-ಇನ್ ಕಾರ್ಯಕ್ರಮದಲ್ಲಿ ಗಾಂಧಿನಗರ ನಿವಾಸಿ ಬಾಲಕೃಷ್ಣ ಎಂಬವರು ವಶಪಡಿಸಿಕೊಂಡ ವಾಹನಗಳನ್ನು ಫುಟ್ಪಾತುಗಳಲ್ಲಿ ಪಾರ್ಕ್ ಮಾಡಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ ಎಂದು ದೂರಿದ್ದರು. ಅವರು ಮಂಗಳೂರು ಪೂರ್ವ ಮತ್ತು ಬರ್ಕೆ ಠಾಣೆಗಳ ಎದುರು ನಿಲ್ಲಿಸಿರುವ ವಾಹನಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಅನಾನುಕೂಲತೆ ಬಗ್ಗೆ ಫೋನಿನಲ್ಲಿ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪೊಲೀಸ್ ಕಮಿಷನರ್ ಸುರೇಶ್, ವಾಹನಗಳನ್ನು ಅದಕ್ಕಾಗಿ ಮೀಸಲಿಟ್ಟ ಸ್ಥಳಗಳಿಗೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಕೆಲವು ವಾಹನಗಳನ್ನು ಕೋರ್ಟು ಆದೇಶ ಪಡೆದ ಬಳಿಕ ಸಂಬಂಧಪಟ್ಟ ಮಾಲಕರಿಗೆ ಹಿಂತಿರುಗಿಸಲಾಗುವುದು ಎಂದು ಹೇಳಿದರು.

ಕಮಿಷನರ್ ಸುರೇಶ್, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕ್ರೈಮ್ ಮತ್ತು ಟ್ರಾಫಿಕ್ ಡಿಸಿಪಿ ಹನುಮಂತರಾಯ ಮತ್ತು ಟ್ರಾಫಿಕ್ ಎಸಿಪಿ ಕೆ ತಿಲಕಚಂದ್ರರಿಗೆ ಸೂಚಿಸಿದರು.