ಶೀಘ್ರದಲ್ಲೇ ಅಜ್ಜರಕಾಡಿನಲ್ಲಿ ರಾಜ್ಯದ ಪ್ರಥಮ ಒಳಾಂಗಣ ಟೆನ್ನಿಸ್ ಸ್ಟೇಡಿಯಂ ಕಾರ್ಯಾರಂಭ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಕಳೆದ ವರ್ಷದ ಜೂನಿನಲ್ಲಿ ಅಜ್ಜರಕಾಡಿನ 72 ಸೆಂಟ್ಸ್ ಜಾಗದಲ್ಲಿ ನಿರ್ಮಾಣ ಕಾರ್ಯಾರಂಭಗೊಂಡಿರುವ ಜಿಲ್ಲಾ ಟೆನ್ನಿಸ್ ಸ್ಟೇಡಿಯಂ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದು ಒಟ್ಟು 3.5 ಕೋಟಿ ರೂ ವೆಚ್ಚದ ಕಾಮಗಾರಿಯಾಗಿದೆ. ಯೋಜನೆಗೆ ರಾಜ್ಯ ಸರ್ಕಾರ ಮತ್ತು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸರಿಗೆ ಸಂಬಂಧಿಸಿದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್ಲೆಡಿ) ನಿಧಿಯಿಂದ ಈಗಾಗಲೇ ತಲಾ ಒಂದೊಂದು ಕೋಟಿ ರೂ ಬಿಡುಗಡೆಯಾಗಿದ್ದರೆ, ಉಳಿದೊಂದು ಕೋಟಿ ರೂ ಸರ್ಕಾರ ಮಂಜೂರು ಮಾಡಿದೆ.

ಸ್ಟೇಡಿಯಂನ ಉತ್ತರ ಮತ್ತು ದಕ್ಷಿಣ ಬದಿಯಲ್ಲಿ ಒಟ್ಟೂ 500 ಮಂದಿ ಕುಳಿತುಕೊಳ್ಳಲು ಗ್ಯಾಲರಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಆಡಳಿತಾತ್ಮಕ ಕೊಠಡಿ, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಲಾಕರ್ ಕೊಠಡಿಗಳು, ತರಬೇತಿದಾರರ ಕೊಠಡಿ, ಪ್ರಥಮ ಚಿಕಿತ್ಸೆ ಕೊಠಡಿ, ಉಗ್ರಾಣ ಮತ್ತು ಒಂದು ತಾಲೀಮು ಕೊಠಡಿ ಒಳಗೊಂಡಿದೆ. ಕಾಫಿಹೌಸ್ ಮತ್ತು ಮಹಿಳೆಯರು ಹಾಗೂ ಪುರುಷರಿಗೆ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ 16 ಕಾರುಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಯೂ ಇದೆ.

ಬ್ರಹ್ಮಾವರ, ಕುಂದಾಪುರ, ತೆಂಕನಿಡಿಯೂರು ಮತ್ತು ಉಡುಪಿಯಲ್ಲಿ ಟೆನ್ನಿಸ್ ಸ್ಟೇಡಿಯಂಗಳಿದ್ದರೂ ಅವೆಲ್ಲವೂ ಹೊರಾಂಗಣ ಕ್ರೀಡೆಗೆ ಸೀಮಿತವಾಗಿದೆ. “ಆದರೆ ಇದು ರಾಜ್ಯದಲ್ಲೇ ಪ್ರಥಮವೆನ್ನಲಾದ ಒಳಾಂಗಣ ಸ್ಟೇಡಿಯಂ ಆಗಿದೆ ” ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

“ಹೊಸ ಸ್ಟೇಡಿಯಂನೊಳಗೆ 2 ಸಿಂಥೆಟಿಕ್ ಟೆನ್ನಿಸ್ ಕೋರ್ಟ್ ನಿರ್ಮಿಸಲಾಗುತ್ತಿದೆ. ಈ ಕೋರ್ಟುಗಳಲ್ಲಿ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಟೂರ್ನಿಗಳು ನಡೆಯುವ ಸಾಧ್ಯತೆಯಿದೆ. ಸ್ಟೇಡಿಯಂ ಪೂರ್ಣಗೊಂಡ ಬಳಿಕ ಯುವ ಟೆನ್ನಿಸ್ ಆಟಗಾರಿಗೆ ತರಬೇತಿಗಾಗಿ ಕೋಚುಗಳಿಬ್ಬರನ್ನು ನಿಯುಕ್ತಿಗೊಳಿಸಲಾಗುತ್ತದೆ ” ಎಂದು ತಿಳಿಸಿದರು.