ಅಕ್ಟೋಬರ್ 2ರಂದು ವೈದ್ಯರ ರಾಜ್ಯವ್ಯಾಪಿ ಸಾಂಕೇತಿಕ ಮುಷ್ಕರ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ರಾಜ್ಯದಾದ್ಯಂತದ ವೈದ್ಯರು ಅಕ್ಟೋಬರ್ 2ರಂದು ರಾಜ್ಯವ್ಯಾಪಿ ಅರ್ಧ ದಿನ ಸಾಂಕೇತಿಕ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದು ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕರ್ನಾಟಕ ಘಟಕ ಅಧ್ಯಕ್ಷ ಡಾ ರಾಜಶೇಖರ್ ಬಳ್ಳಾರಿ ಹೇಳಿದರು.

ಮಂಗಳೂರು ಐಎಂಎ ಸಂಘಟಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ದೇಶದಾದ್ಯಂತದ ವೈದ್ಯ ಸಮೂಹವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ವೈದ್ಯರು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸ್ಥಿತಿಯಲ್ಲಿಲ್ಲ. ಇದೇ ವೇಳೆ  ರಾಜ್ಯ ಸರ್ಕಾರವು ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಷ್ಮೆಂಟ್ಸ್ ಕಾಯ್ದೆಗೆ ತಿದ್ದುಪಡಿ ತರುವ ಯೋಜನೆಯಲ್ಲಿದೆ. ಆದರೆ ಐಎಂಎ ಈ ತಿದ್ದುಪಡಿಯನ್ನು ವಿರೋಧಿಸುತ್ತದೆ. ಪ್ರಸ್ತಾವಿತ ತಿದ್ದುಪಡಿಯನ್ನು ನೋಡಲು ಜಂಟಿ ಸಮಿತಿಯೊಂದನ್ನು ರಚಿಸಲಾಗಿದೆ. ಸರ್ಕಾರ ಈ ತಿದ್ದುಪಡಿಯನ್ನು ಕೈ ಬಿಡಬೇಕು ಎಂಬುದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನಿನ ಆಗ್ರಹ” ಎಂದು  ಡಾ ಬಳ್ಳಾರಿ ಹೇಳಿದರು.