ಪರಿಶಿಷ್ಟ ಪಂಗಡಕ್ಕೆ ಹಾಲಕ್ಕಿ ಒಕ್ಕಲಿಗರ ಸೇರ್ಪಡೆ : ಹೆಚ್ಚಿನ ಮಾಹಿತಿ ಒಳಗೊಂಡ ಮರುಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ

ಹಲವು ವರ್ಷಗಳ ಕನಸು ಸಾಕಾರಗೊಳ್ಳುವ ನಿರೀಕ್ಷೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಹೆಚ್ಚಿನ ಮಾಹಿತಿ, ಸ್ಪಷ್ಟನೆ ಬಯಸಿ ಕೇಂದ್ರ ಸರ್ಕಾರದಿಂದ ಮರಳಿ ಬಂದಿದ್ದ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಡತವು ಈಗ ಪುನಃ ಹೆಚ್ಚಿನ ಅಧ್ಯಯನ ಒಳಗೊಂಡ ಮಾಹಿತಿಯುಳ್ಳ ಮರುಪ್ರಸ್ತಾವನೆಯೊಂದಿಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಈ ಸಮುದಾಯದ ಹಲವು ವರ್ಷಗಳ ಕನಸು ಸಾಕಾರಗೊಳ್ಳಬಹುದೇ ಎಂಬ ನಿರೀಕ್ಷೆ ಮೂಡಿದೆ. ತಮ್ಮನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವಂತೆ ಬೇಡಿಕೆಯನ್ನಿಟ್ಟು ಈ ಸಮುದಾಯ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದು, ಪ್ರಸಕ್ತ ಮೋದಿ ಸರ್ಕಾರ ಈ ಬೇಡಿಕೆಯನ್ನು ಈಡೇರಿಸುವ ಭರವಸೆ ಇವರದ್ದಾಗಿದೆ.

 ಕಡು ಬಡವರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಹಾಲಕ್ಕಿ ಒಕ್ಕಲಿಗರು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಇನ್ನೂವರೆಗೂ ಸಾಧ್ಯವಾಗಿಲ್ಲ. ಕಳೆದ ಹಲವು ದಶಕಗಳಿಂದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಹೋರಾಟಗಳು ನಡೆಯುತ್ತಲೇ ಇತ್ತು.

ಬೆಳಂಬಾರದ ನಾಟಿ ವೈದ್ಯ ಹನುಮಂತ ಬೊಮ್ಮು ಗೌಡ ಅವರು ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ನಂತರ ವಿವಿಧ ಹಂತದಲ್ಲಿ ನಿರಂತರವಾಗಿ ಹೋರಾಟವನ್ನು ನಡೆಸುತ್ತಲೇ ಬಂದಿದ್ದರು. ತಾಲೂಕು ಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಆಯಾ ಜನಪ್ರತಿನಿಧಿ ಮತ್ತು ಅಧಿಕಾರಿ ವರ್ಗದವರನ್ನು ಭೇಟಿಯಾಗಿ ಸಮಾಜದ ಸ್ಥಿತಿಗತಿಗಳನ್ನು ವಿವರಿಸಿದ್ದರು. ಹಾಲಕ್ಕಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಅರ್ಹತೆಯನ್ನು ಹೊಂದಿದ್ದರಿಂದಾಗಿ ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 3-2-2010ರಂದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಿತ್ತು.

 ಯಾಕೆ ತಿರಸ್ಕಾರ ?

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಸಲ್ಲಿಕೆಯಾದ ಶಿಫಾರಸ್ಸಿನಲ್ಲಿ ಹಲವು ಗೊಂದಲಗಳಿದ್ದವು. ಹಾಲಕ್ಕಿ ಒಕ್ಕಲಿಗ – ಹವ್ಯಕರಿಗೆ ಇರುವ ವ್ಯತ್ಯಾಸ, ಸಾರಸ್ವತ ಬ್ರಾಹ್ಮಣರಿಗೆ – ಹಾಲಕ್ಕಿಗಳಿಗೆ ಇರುವ ವ್ಯತ್ಯಾಸ, ಹಾಲಕ್ಕಿ ಒಕ್ಕಲು ಹಾಗೂ ಮೈಸೂರು ಪ್ರಾಂತದ ಒಕ್ಕಲಿಗ ಇವರಿಗೆ ಇರುವ ವ್ಯತ್ಯಾಸ, ಬೇಟೆ ದೇವರಿಗೆ ಸಂಬಂಧಿಸಿದ ಅಧ್ಯಯನ, ವೆಂಕಟರಮಣ ಮತ್ತು ತುಳಸಿ ಪೂಜೆ ವೈಷ್ಣವರು ಮಾಡುವಂತಹದ್ದು, ಅದು ಹಾಲಕ್ಕಿಗಳಿಗೆ ಹೇಗೆ ಬಂತು ಎಂಬ ಅಂಶಗಳನ್ನು ಒಳಗೊಂಡು ಕೇಂದ್ರದಿಂದ ತಿರಸ್ಕøತಗೊಂಡಿತ್ತು.

 ಮತ್ತೆ ಹೋರಾಟ

ಕೇಂದ್ರದಿಂದ ಪ್ರಸ್ತಾವನೆ ತಿರಸ್ಕøತಗೊಂಡ ನಂತರ ಹನುಮಂತ ಬೊಮ್ಮು ಗೌಡ ಅವರ ನೇತೃತ್ವದಲ್ಲಿ ಹಲವರು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಅವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಂಡರು. ಪುನಃ ಅಧ್ಯಯನ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಆರ್ ವಿ ದೇಶಪಾಂಡೆಯವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಈ 5 ಅಂಶಗಳ ಕುರಿತು ಅಧ್ಯಯನ ನಡೆಸುವಂತೆ ಮೈಸೂರು ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿತ್ತು.

ಸರ್ಕಾರದ ಆದೇಶವನ್ನು ಪರಿಗಣಿಸಿ ಮೈಸೂರ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಬಸವನಗೌಡ, ರಜನೀಶ ಮತ್ತು ಮಹಾಂತೇಶ ಇವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದರು. ತಮ್ಮ ಅಧ್ಯಯನಕ್ಕೆ ಗೋಕರ್ಣದ ಬಾವಿಕೊಡ್ಲ ಗ್ರಾಮವನ್ನು ಆಯ್ಕೆ ಮಾಡಿಕೊಂಡು 280 ಪುಟಗಳ ವರದಿ ಸಿದ್ಧಪಡಿಸಿ ಒಂದು ಪ್ರತಿ ರಾಜ್ಯ ಸರ್ಕಾರಕ್ಕೆ, ಇನ್ನೊಂದು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 8ರಂದು ಸಲ್ಲಿಸಿದ್ದರು. ಈ ಅಧ್ಯಯನ ತಂಡಕ್ಕೆ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಕಾರ್ಯದರ್ಶಿ ಎಂ ಎಚ್ ಗೌಡ, ಪ್ರಮುಖರಾದ ರಮೇಶ ಗೌಡ ಬಿಣಗಾ, ಈಶ್ವರ ಗೌಡ ಬಾವಿಕೊಡ್ಲ, ಮಾಜಿ ಶಾಸಕ ಕೆ ಎಚ್ ಗೌಡ, ವಸಂತ ಗೌಡ ಅಂಬಾರಕೊಡ್ಲ, ಅರುಣ ಗೌಡ ಗೋಕರ್ಣ, ಪುರುಷೋತ್ತಮ ಗೌಡ ಅಮದಳ್ಳಿ, ಕಾಶಿನಾಥ ಗೌಡ ಸೇರಿದಂತೆ ಹಲವರು ಮಾಹಿತಿ ನೀಡಿ ಸಹಕರಿಸಿದ್ದರು.