ಹೆದ್ದಾರಿಯಲ್ಲಿ ಮದ್ಯ ನಿಷೇಧ ಮರುಪರಿಶೀಲನೆಗೆ ಸುಪ್ರೀಂ ಕೋರ್ಟಿಗೆ ರಾಜ್ಯದ ಅರ್ಜಿ

ಸಾಂದರ್ಭಿಕ ಚಿತ್ರ

ಬೆಂಗಳೂರು :  ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಪ್ರಿಲ್ 2017ರಿಂದ ಮದ್ಯಮಾರಾಟವನ್ನು ನಿಷೇಧಿಸಿರುವ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಅರ್ಜಿ ಸಲ್ಲಿಸಿದ್ದು ಮರುಪರಿಶೀಲನೆಗೆ ಕೋರಿದೆ.

“ಸುಪ್ರೀಂಕೋರ್ಟ್ ತೀರ್ಪು ಜಾರಿಯಾದಲ್ಲಿ ರಾಜ್ಯದಲ್ಲಿರುವ ಶೇ 60ಕ್ಕೂ ಹೆಚ್ಚು ಮದ್ಯದಂಗಡಿಯ ಪರವಾನಿಗಳು ಅನೂರ್ಜಿತವಾಗುತ್ತವೆ. ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧಿಸುವುದರಿಂದ ಇದನ್ನೇ ನಂಬಿ ಬದುಕುವ ಸಾವಿರಾರು ನೌಕರರು ಬೀದಿ ಪಾಲಾಗುತ್ತಾರೆ” ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಾಜ್ಯದಲ್ಲಿರುವ ಒಟ್ಟು 10097 ಪರವಾನಿಗೆಗಳ ಪೈಕಿ 6000 ಮದ್ಯದಂಗಡಿಗಳು ಹೆದ್ದಾರಿಗಳಲ್ಲೇ ಇವೆ.  ಈ ತೀರ್ಪು ಜಾರಿಯಾದಲ್ಲಿ ಮಾರ್ಚ್ 31ರ ಒಳಗೆ ಈ ಅಂಗಡಿಗಳನ್ನು ಸ್ಥಳಾಂತರಿಸಬೇಕಾಗುತ್ತದೆ, ಇವುಗಳ ಪೈಕಿ ಸ್ಟಾರ್ ಹೋಟೆಲುಗಳೂ ಇವೆ ಎಂದು ಸರ್ಕಾರಿ ವಕ್ತಾರರು ಹೇಳಿದ್ದಾರೆ.

ಕೋರ್ಟ್ ಆದೇಶದಿಂದ ಬಾಧಿತವಾಗುವ ಮದ್ಯದಂಗಡಿಗಳ ಪಟ್ಟಿಯನ್ನು ರಾಜ್ಯದ 33 ಅಬಕಾರಿ ಉಪ ಆಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಹೆದ್ದಾರಿಗಳಲ್ಲಿ ವರ್ಷಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಅಪಘಾತದಿಂದ ಸಾವನ್ನಪ್ಪುತ್ತಿದ್ದು ಈ ಹಿನ್ನೆಲೆಯಲ್ಲೇ ಸುಪ್ರೀಂಕೋರ್ಟ್ ಹಾಲಿ ತೀರ್ಪು ನೀಡಿದೆ.

ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿ ಇರುವಂತಿಲ್ಲ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿಗೆ ಸೇರುವ ಎಲ್ಲ ಹೆದ್ದಾರಿಗಳಿಗೂ ಈ ಆದೇಶ ಅನ್ವಯಿಸುತ್ತದೆ. ಹೆದ್ದಾರಿಗಳಲ್ಲಿ ಮದ್ಯ ಮಾರಾಟಗಾರರ ಜಾಹೀರಾತುಗಳನ್ನೂ ಸಹ ತೆಗೆದು ಹಾಕುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.