`ಕಾಂಗ್ರೆಸ್ಸಲ್ಲಿ ಈಗ ರಾಜ್ಯದ ನಾಯಕರೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿದೆ’

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಕಾಂಗ್ರೆಸ್ಸಿನಲ್ಲಿ ಈಗ ರಾಜ್ಯದ ನಾಯಕರೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವನ್ನು ಪಡೆದಿದ್ದಾರೆ” ಎಂದು ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಹೇಳಿದರು.

ನಗರದ ನಂದನಗದ್ದಾದಲ್ಲಿ ರವಿವಾರ ಭವನವೊಂದರ ಉದ್ಘಾಟನೆಗೆ ಬಂದಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. “ಹಿಂದೆಲ್ಲ ಕಾಂಗ್ರೆಸ್ಸಿನಲ್ಲಿ ಯಾವುದೇ ನಿರ್ಣಯ ಕೈಗೊಳ್ಳಬೇಕಾದರೂ ಹೈಕಮಾಂಡ್ ಪರವಾನಗಿ ಪಡೆಯಬೇಕಿತ್ತು. ಆದರೆ ಈಗ ಸ್ಥಳೀಯ ನಾಗರಿಕರಿಗೂ ನಿರ್ಣಯದ ಬಗೆಗೆ ಪ್ರಾಶಸ್ತ್ಯ ನೀಡಲಾಗಿದೆ. ಭಿನ್ನಮತ, ಅಸಮಾಧಾನ ಕಾಂಗ್ರೆಸ್ಸಿನಲ್ಲಿ ಮಾತ್ರವಲ್ಲದೇ ಬಿಜೆಪಿ, ಜೆಡಿಎಸ್ಸಿನಲ್ಲಿಯೂ ಇದೆ. ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ಇದೆ. ಪಕ್ಷದ ಹಿತದ ದೃಷ್ಠಿಯಿಂದ ನಾಯಕರ ನಡವಳಿಕೆ ಸರಿ ಕಂಡುಬರದೇ ಇದ್ದರೆ, ಮಾತನಾಡುವ ಅಧಿಕಾರವನ್ನು ಕಾರ್ಯಕರ್ತರಿಗೆ ಪಕ್ಷ ನೀಡಿದೆ. ಅದೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಜೆಪಿಗರಿಗೆ ಮಾತನಾಡಲು ಸಾಧ್ಯವೇ” ಎಂದು ಅಣಕಿಸಿದರು.

“ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಸ್ ಎಂ ಕೃಷ್ಣ ಅವರು ರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟಿರಬಹುದು. ಈಗಿನ ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವ ಅವರು, ತಾವು ಅಧಿಕಾರದಲ್ಲಿದ್ದಾಗಲೂ ಪಕ್ಷ ಸೋತಿತ್ತು ಎಂಬುದನ್ನು ಮರೆಯಬಾರದು. ದೇಶದಲ್ಲಿ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮರಣದ ಬಳಿಕ ಕಾಂಗ್ರೆಸ್ ಕಥೆ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಂತರ ಪಕ್ಷದ ಚುಕ್ಕಾಣಿ ಹಿಡಿದ ನಾಯಕರು ದೇಶಕ್ಕೆ ಉತ್ತಮ ಆಡಳಿತ ನೀಡಿದನ್ನು ಸ್ಮರಿಸಬಹುದು. ಈಗಿನ ರಾಹುಲ್ ಗಾಂಧಿ ಕೂಡ ಪಕ್ಷ ಸಂಘಟನೆಗೆ ಶ್ರಮಿಸುತ್ತಿದ್ದಾರೆ” ಎಂದರು.