ಎಸ್ ಸಿ ಡಿ ಸಿ ಸಿ ಬ್ಯಾಂಕಿಗೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಪ್ರಶಸ್ತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸಹಕಾರ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳ ಜೊತೆಗೆ ಹೊಸ ತಂತ್ರಜ್ಞಾನ ಅಳವಡಿಕೆಗಳ ಮೂಲಕ ದೇಶದ ಸಹಕಾರಿ ಬ್ಯಾಂಕಿಂಗಿನಲ್ಲಿ ಉತ್ಕøಷ್ಠ ಸಾಧನೆಗೈದ ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ (ಎಸ್ ಸಿ ಡಿ ಸಿ ಸಿ ಬ್ಯಾಂಕ್) ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿ 19ನೇ ಬಾರಿಗೆ ಲಭಿಸಿದೆ.

ನಿರಂತರ ಸಮಾಜಮುಖಿ ಸೇವೆಗಳೊಂದಿಗೆ ತನ್ನ ಗ್ರಾಹಕರಿಗೆ ಸಂತೃಪ್ತ ಸೇವೆಯನ್ನು ನೀಡುತ್ತಿರುವ ಎಸ್ ಸಿ ಡಿ ಸಿ ಸಿ ಬ್ಯಾಂಕ್ 2015-16ನೇ ಸಾಲಿನಲ್ಲಿ ಸರ್ವಾಂಗೀಣ ಪ್ರಗತಿಯೊಂದಿಗೆ ಗುರುತಿಸಿಕೊಂಡು ಲೆಕ್ಕ ಪರಿಶೋಧನೆಯಲ್ಲಿ ಎ ವರ್ಗವನ್ನು ಪಡೆದು ಈ ರಾಜ್ಯಪ್ರಶಸ್ತಿಗೆ ಆಯ್ಕೆಗೊಂಡಿದೆ.

ಕೋರ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗಿನಂತಹ ವಿನೂತನ ಬ್ಯಾಂಕಿಂಗ್ ಸೇವೆಯ ಮೂಲಕ ರಾಜ್ಯ-ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಎಸ್ ಸಿ ಡಿ ಸಿ ಸಿ ಬ್ಯಾಂಕ್ ರೈತರಿಗೆ ರೂಪೇ ಕಿಸಾನ್ ಕಾರ್ಡ್ ಹಾಗೂ ಬ್ಯಾಂಕಿನ ಎಲ್ಲಾ ಗ್ರಾಹಕರಿಗೆ ರೂಪೇ ಡೆಬಿಟ್ ಕಾರ್ಡ್ ವಿತರಿಸುವ ಮೂಲಕ ಈ ಯೋಜನೆಯನ್ನು ಜಾರಿಗೆ ತಂದ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಮನ್ನಣೆಗೂ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪಾತ್ರವಾಗಿದೆ.

ಕೃಷಿ ಸಾಲ ವಸೂಲಾತಿಯಲ್ಲಿ ಶೇಕಡಾ ನೂರರ ಸಾಧನೆಯನ್ನು ಕಳೆದ 23 ವರ್ಷಗಳಿಂದ ಸತತವಾಗಿ ದಾಖಲಿಸಿಕೊಂಡಿರುವ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಎಂ ಎನ್ ರಾಜೇಂದ್ರಕುಮಾರ್ ಅವರ ದಕ್ಷ ನಾಯಕತ್ವದಲ್ಲಿ ಹಲವಾರು ಪ್ರಗತಿಪರ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಮಾತ್ರವಲ್ಲ, ಗ್ರಾಮೀಣ ಭಾಗದ ಜನರ ಆರ್ಥಿಕ ಶಕ್ತಿಯಾಗಿ ಈ ಬ್ಯಾಂಕ್ ಬೆಳೆದಿದೆ.

ಎಂ ಎನ್ ರಾಜೇಂದ್ರಕುಮಾರ್ ಅವರು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾಗಿ 23 ವರ್ಷ ಯಶಸ್ವಿಯಾಗಿ ಪೂರೈಸಿರುವ ಈ ಸಂದರ್ಭದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕಿಗೆ ಸತತವಾಗಿ 19ನೇ ಬಾರಿ ರಾಜ್ಯ ಅಪೆಕ್ಸ್ ಬ್ಯಾಂಕಿನ ಪ್ರಥಮ ಪ್ರಶಸ್ತಿ ದೊರೆಯುತ್ತಿದೆ. ಜನಸಾಮಾನ್ಯರ ಸಹಕಾರಿ ಬ್ಯಾಂಕ್ ಎಂದೇ ಗುರುತಿಸಿಕೊಂಡಿರುವ ಎಸ್ ಸಿ ಡಿ ಸಿ ಸಿ ಬ್ಯಾಂಕ್ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಗಮನಾರ್ಹ ಸಾಧನೆ ಮೆರೆದಿದೆ.

ಬೆಂಗಳೂರಿನಲ್ಲಿ ಸೆಪ್ಟೆಂಬರ್ 23ರಂದು ನಡೆಯುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯದಲ್ಲೇ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರಕುಮಾರ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.