ಬಜ್ಪೆ ವಿಮಾನ ನಿಲ್ದಾಣದಲ್ಲಿ ಕೈಚೀಲಗಳ ಸ್ಟಾಂಪಿಂಗ್ ಟ್ಯಾಗ್ ಸಿಸ್ಟಂ ಶೀಘ್ರ ರದ್ದು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಲಗ್ಗೇಜ್, ಹ್ಯಾಂಡ್ ಬ್ಯಾಗ್ ಹಿಡಿದುಕೊಂಡು ವಿಮಾನದಲ್ಲಿ ತೆರಳುವ ಸಂದರ್ಭ ಪ್ರಯಾಣಿಕರು ಎದುರಿಸುತ್ತಿದ್ದ ಕಿರಿಕಿರಿಗೆ ಇನ್ಮೇಲೆ ಬ್ರೇಕ್ ಬೀಳಲಿದೆ. ಕೈಚೀಲಗಳ ಸ್ಟಾಂಪಿಂಗ್ ಟ್ಯಾಗ್ ಪದ್ಧತಿ ರಾಂಚಿ, ಮಂಗಳೂರು ಸಹಿತ ದೇಶದ 10 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ.

ಪ್ರಸ್ತುತ ಕೈಚೀಲಗಳಿಗೆ ಟ್ಯಾಗ್ ಹಾಕಿ, ಅದನ್ನು ಸಿಐಎಸ್ಸೆಫ್ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ. ಚೀಲದಲ್ಲಿ ಆಕ್ಷೇಪಾರ್ಹ ವಸ್ತು ಇಲ್ಲ ಎಂದು ಖಚಿತವಾದ ಬಳಿಕ ಸೀಲ್ ಒತ್ತುತ್ತಾರೆ. ಈ ವ್ಯವಸ್ಥೆ ಪ್ರಯಾಣಿಕರಿಗೆ ಬಹಳಷ್ಟು ಕಿರಿಕಿರಿ ಉಂಟು ಮಾಡುತ್ತಿತ್ತು. ಅಲ್ಲದೆ ಕೆಲವು ಸಂದರ್ಭ ಪ್ರಯಾಣಿಕರು ವಿಮಾನ ಯಾನ ಮಾಡಲು ಸಾಧ್ಯವಾಗದೇ ಹೋದ ಅದೆಷ್ಟೋ ನಿದರ್ಶನಗಳೂ ಇವೆ. ಕೈಚೀಲಗಳ ಸ್ಟಾಂಪಿಂಗ್ ಟ್ಯಾಗ್ ಪದ್ಧತಿಯ ಬದಲಿಗೆ ಆಧುನಿಕ ಸ್ಮಾರ್ಟ್ ಕೆಮರಾ ಹಾಗೂ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಆಕ್ಷೇಪಾರ್ಹ ವಸ್ತುಗಳಿದ್ದರೆ ಈ ವ್ಯವಸ್ಥೆ ಕೂಡಲೇ ಪತ್ತೆಹಚ್ಚುತ್ತದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ದೇಶಕ ವಿ ವಿ ರಾವ್ ಹೇಳಿದ್ದಾರೆ. ಮಂಗಳೂರು ನಿಲ್ದಾಣದಲ್ಲೂ ಹ್ಯಾಂಡ್ ಬ್ಯಾಗೇಜುಗಳ ಸ್ಟಾಪಿಂಗ್ ಟ್ಯಾಗ್ ಪದ್ಧತಿ ರದ್ದು ಪ್ರಕ್ರಿಯೆ ಪ್ರಸ್ತಾವನೆ ಹಂತದಲ್ಲಿದೆ. ಇನ್ನೇನು ಕೆಲವು ತಿಂಗಳಿನಲ್ಲಿ ರದ್ದಾಗಲಿದೆ ಎಂದವರು ಹೇಳಿದ್ದಾರೆ.