ಚೂರಿ ಇರಿತ ಪ್ರಕರಣ ಆರೋಪಿಗಳ ಸೆರೆಯಿಲ್ಲ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಕಲ್ಲಡ್ಕ ಘಟನೆಯ ಬಳಿಕ ಮಂಗಳವಾರ ತಡ ರಾತ್ರಿ ವೇಳೆ ಮೆಲ್ಕಾರ್ ಜಂಕ್ಷನ್ನಿನಲ್ಲಿ ಪವನ್ ಕುಮಾರ್ ಎಂಬ ಯುವಕನ ಮೇಲೆ ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಪತ್ತೆ ಹಚ್ಚಲು ಪೊಲೀಸರು ವಿಫಲರಾಗಿದ್ದಾರೆ. ಘಟನೆಯ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಎಸ್ಪಿ ಪತ್ರಿಕೆಗೆ ತಿಳಿಸಿದ್ದಾರೆ.

ಮೆಲ್ಕಾರ್ ಘಟನೆಗೂ ಕಲ್ಲಡ್ಕ ಘಟನೆಗೂ ಯಾವುದೇ ಸಂಬಂಧ ಇದ್ದಂತೆ ಕಂಡು ಬರುತ್ತಿಲ್ಲ. ಇದೊಂದು ಪ್ರತ್ಯೇಕ ಪ್ರಕರಣವಾಗಿದ್ದು, ಈಗಾಗಲೇ ಆರೋಪಿಗಳ ಸುಳಿವು ಪೊಲೀಸರಿಗೆ ದೊರೆತಿದ್ದು, ಶೀಘ್ರ ಬೇಧಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ಪವನ್ ಕ್ರಿಕೆಟ್ ಬೆಟ್ಟಿಂಗ್ ಸಹಿತ ಕೆಲವೊಂದು ಕಾರಣಗಳಿಗೆ ಕೆಲವರೊಂದಿಗೆ ವೈಯುಕ್ತಿ ವೈಷಮ್ಯ ಹೊಂದಿದ್ದು, ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಕೇಂದ್ರೀಕರಿಸಿದ್ದಾರೆ. ಗಾಯಾಳು ಪವನ್ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಣೆ ಮತ್ತು ಎದೆ ಭಾಗಕ್ಕೆ ಇರಿದ ಗಾಯಗಳಾಗಿದ್ದು, ಆಳವಾದ ಗಾಯವಾಗದ ಕಾರಣ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.