ಕೋಮುವಾದಿ ಶಕ್ತಿಗಳನ್ನು ಮಣಿಸಲು ಶ್ರೀರಾಮರೆಡ್ಡಿ ಕರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಸೌಹಾರ್ದದ ನೆಲೆಯಾಗಿದ್ದ ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೋಮುವಾದ ತಳವೂರಿದ್ದು, ಸಂಘ ಪರಿವಾರದ ಸಂಘಟನೆಗಳು ಅದರಲ್ಲಿ ಪ್ರಧಾನ ಪಾತ್ರ ವಹಿಸಿವೆ. ಕರಾವಳಿಯು ಹಿಂದುತ್ವದ ಪ್ರಯೋಗ ಶಾಲೆಯಾಗಿದ್ದು, ಕರಾವಳಿಯಲ್ಲಿ ಲವ್ ಜಿಹಾದ್, ಗೋರಕ್ಷಣೆ, ನೈತಿಕ ಪೊಲೀಸ್‍ಗಿರಿ ಹೆಸರಲ್ಲಿ ಅಲ್ಪಸಂಖ್ಯಾಕರು, ಮಹಿಳೆಯರ ಮೇಲೆ ದಾಳಿಗಳು ನಡೆದಿವೆ. ಕೊಲೆಗಳು ನಡೆದಿವೆ. ಕಾಂಗ್ರೆಸ್ಸಿಗಾಗಲೀ, ಪ್ರಾದೇಶಿಕ ಪಕ್ಷಗಳಿಗಾಗಲೀ ಹಿಂದುತ್ವದ ದಾಳಿಗಳನ್ನು ತಡೆಯುವ ಶಕ್ತಿಯಿಲ್ಲ. ಏಕೆಂದರೆ ಅವುಗಳು ಅಧಿಕಾರಕ್ಕಾಗಿ ಕೋಮುವಾದಿ ಶಕ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿವೆ. ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರವೇ ಕೋಮುವಾದಿ ಶಕ್ತಿಗಳನ್ನು ದೇಶದಾದ್ಯಂತ ಎದುರಿಸುತ್ತಿವೆ. ಇಂತಹ ಎಡಪಕ್ಷಗಳನ್ನು ಬಲಪಡಿಸಿದಲ್ಲಿ ಮಾತ್ರ ಕೋಮುವಾದಿಗಳನ್ನು ಮಣಿಸಲು ಸಾಧ್ಯ” ಎಂಬುದಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ ವಿ ಶ್ರೀರಾಮರೆಡ್ಡಿ ಕರೆ ನೀಡಿದರು.

ಅವರು ನಿನ್ನೆ ಮಂಗಳೂರಿನ ಪುರಭವನದಲ್ಲಿ ಸಿಪಿಐ(ಎಂ) ದ ಕ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಕೋಮುವಾದದ ವಿರುದ್ಧ ಜಿಲ್ಲಾ ಸೌಹಾರ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಇತ್ತೀಚೆಗೆ ಮಾಧ್ಯಮದ ಗುಂಪೊಂದು ನಡೆಸಿದ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರು ತಾವೇ ಲವ್ ಜಿಹಾದ್ ಸೃಷ್ಟಿಸಿ ದಾಳಿ ಮಾಡಿದವರೆಂದು ಹೇಳಿದ್ದು ವರದಿಯಾಗಿದೆ. ಅದೇ ರೀತಿ ಪೊಲೀಸ್ ಇಲಾಖೆಯಲ್ಲೂ ದ.ಕ ಜಿಲ್ಲೆಯಲ್ಲಿ ಶೇ 30 ಮಂದಿ ಹಿಂದುತ್ವವಾದಿಗಳಿದ್ದಾರೆಂದು ಹೇಳಿದ್ದೂ ವರದಿಯಾಗಿದೆ. ಈ ಕಾರಣದಿಂದಲೇ ಕೋಮುವಾದಿ ಶಕ್ತಿಗಳು ದಿಟ್ಟ, ನೇರನಡೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದುಬರುತ್ತದೆ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ಕೋಮುವಾದಿ ಚಟುವಟಿಕೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಅಂತಹವರ ಚಟುವಟಿಕೆಗೆ ರಕ್ಷಣೆ ನೀಡಲಾಗುತ್ತಿದೆ. ಆದರೆ ರೈತರ, ಕೃಷಿ ಕಾರ್ಮಿಕರ ಅಖಿಲ ಭಾರತ ಜಾಥಾದ ಮೆರವಣಿಗೆಗೆ ಅವಕಾಶ ಕೊಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಕೋಮುವಾದದ ವಿರುದ್ಧ ಅಳುಕಿ ನಡೆಯುತ್ತಿದೆ” ಎಂದು ಶ್ರೀರಾಮರೆಡ್ಡಿ ಟೀಕಿಸಿದರು.

“ಜಾತ್ಯತೀತ ನಿಲುವು ಎಂದರೆ ಧರ್ಮನಿರಪೇಕ್ಷತೆ. ಅಂದರೆ ರಾಜಕಾರಣದಲ್ಲಿ ಧರ್ಮವನ್ನು ಸೇರಿಸಕೂಡದು. ಧರ್ಮ ರಾಜಕೀಯವನ್ನು ನಿಯಂತ್ರಣ ಮಾಡಬಾರದು. ಹಾಗೆ ಮಾಡಿದಲ್ಲಿ ದೇಶ ನಾಶವಾದಂತೆಯೇ ಸರಿ. ಎರಡನೆಯ ಮಹಾಯುದ್ಧ ಕಾಲದಲ್ಲಿ ಜರ್ಮನಿ ಮತ್ತು ಇಟಲಿ ದೇಶಗಳು ನಾಶವಾದುದು ಧರ್ಮ ರಾಜಕೀಯವನ್ನು ನಿಯಂತ್ರಣ ಮಾಡಿದ್ದರಿಂದ. ಕೊನೆಗೂ ಹಿಟ್ಲರನ ಪ್ಯಾಸಿಸ್ಟ್ ಸೈನ್ಯವನ್ನು ಸೋಲಿಸಿದ್ದು ರಷ್ಯಾದ ಕೆಂಪು ಸೇನೆ. ಇವತ್ತು ಭಾರತದಲ್ಲಿಯೂ ಎಲ್ಲ ಬಗೆಯ ಕೋಮುವಾದವನ್ನು ಎದುರಿಸುತ್ತಿರುವುದು ಸಿಪಿಐ(ಎಂ) ಮತ್ತು ಎಡಪಕ್ಷಗಳು ಮಾತ್ರವೇ. ಆದುದರಿಂದ ಕೋಮುವಾದವನ್ನು ದೃಢವಾಗಿ ಎದುರಿಸಲು ಎಡಪಕ್ಷಗಳನ್ನು ಬಲಪಡಿಸಬೇಕಾಗಿದೆ” ಎಂದು ಅವರು ಕರೆನೀಡಿದರು.

ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲೆ ಚಂದ್ರಕಲಾ ನಂದಾವರ ಮಾತನಾಡಿ, “ಕೋಮುವಾದಿ ಶಕ್ತಿಗಳು ಶ್ರೀಮಂತ ಹಾಗೂ ಮೇಲು ವರ್ಗದವರಿಂದ ನಿರ್ದೇಶಿಸಲ್ಪಟ್ಟಿದ್ದು, ಅವರುಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಾ ಬಡ ದಲಿತ ಹಿಂದುಳಿದ ಮಕ್ಕಳನ್ನು ಕೋಮುವಾದಿ ಗೂಂಡಾ ವೃತ್ತಿಗೆ ತಳ್ಳುತ್ತಿರುವ ಸಂಘಟನೆಗಳಾಗಿವೆ. ಇದಕ್ಕೆ ದುಡಿಯುವ ವರ್ಗದ ಕುಟುಂಬದ ಮಕ್ಕಳೂ ಬಲಿ ಬಿದ್ದಿದ್ದಾರೆ. ವಿದ್ಯಾಸಂಸ್ಥೆಗಳಲ್ಲಿ ಬಡವರ ಮಕ್ಕಳನ್ನೇ ಕೋಮುವಾದಿಗಳು ತಮ್ಮ ಹೋರಾಟದ ಕಾಲಾಳುಗಳಾಗಿ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಅವರು ನೀಡುವ ಕೈಕಾಸಿಗೆ ಬಲಿಯಾದ ಯುವಕರು, ಕೆಲಸ ಮಾಡದೆ ವೈಭವದ ಜೀವನ ಮಾಡುವ ಕನಸು ಕಾಣುತ್ತಾ ಸಮಾಜಕ್ಕೆ ಹೊರೆಯಾಗುತ್ತಿದ್ದಾರೆ” ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕಮ್ಯೂನಿಸ್ಟ್ ಮುಖಂಡ ಕೆ ಆರ್ ಶ್ರೀಯಾನ್ ವಹಿಸಿದ್ದರು. ಯಾದವ ಶೆಟ್ಟಿ ಸ್ವಾಗತಿಸಿ, ಸಿಪಿಐ(ಎಂ) ದ ಕ ಕಾರ್ಯದರ್ಶಿ ವಸಂತ ಆಚಾರಿ ವಂದಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು ಬಿ ಲೋಕಯ್ಯ, ಜೆ ಬಾಲಕೃಷ್ಣ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಸುನಿಲ್ ಕುಮಾರ್ ಬಜಾಲ್ ವೇದಿಕೆಯಲ್ಲಿದ್ದರು.