ಪ್ರಸಾದ್ ಸೋಲು ರಾಜ್ಯದಲ್ಲಿ ಬಿಜೆಪಿಯ ಅವನತಿ ಸೂಚನೆ

ಶ್ರೀನಿವಾಸ್‍ಪ್ರಸಾದ್

ಶ್ರೀನಿವಾಸ್ ಪ್ರಸಾದ್ ಅವರ ಬಹುತೇಕ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದು ತಮ್ಮ ನಾಯಕರೊಡನೆ ಪಕ್ಷ ನಿಷ್ಠೆ ಬದಲಿಸದಿರುವುದು ಪ್ರಸಾದ್ ಅವರ ಸೋಲಿಗೆ ಕಾರಣವಾಗಿದೆ.

ನಂಜನಗೂಡು ಉಪಚುನಾವಣೆಯಲ್ಲಿ ಮಾಜಿ ಕಾಂಗ್ರೆಸ್ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಅನುಭವಿಸಿರುವುದು ಅವರ ರಾಜಕೀಯ ಜೀವನಕ್ಕೆ ಚರಮ ಗೀತೆ ಹಾಡಿದಂತಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ ಎಂಬ ನೆಪ ಒಡ್ಡಿ ಪಕ್ಷಾಂತರ ಮಾಡಿದ ಶ್ರೀನಿವಾಸ ಪ್ರಸಾದ್ ಹಲವು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವುದು ಬಿಜೆಪಿಗೂ ಮುಖಭಂಗವಾದಂತಿದೆ.

ಶ್ರೀನಿವಾಸ ಪ್ರಸಾದ್ ಅವರ ಅತಿಯಾದ ಆತ್ಮವಿಶ್ವಾಸ ಮತ್ತು ಪಕ್ಷದ ಬೇಜವಾಬ್ದಾರಿತನವೇ ಸೋಲಿಗೆ ಕಾರಣ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. 2013ರ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿ ತನ್ನ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರೂ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಸಾದ್ ಅವರ ಹಿಂಬಾಲಕರಿಗೆ ಸೂಕ್ತ ಅವಕಾಶ ನೀಡದೆ ಪಕ್ಷದ ಮೂಲ ಸದಸ್ಯರಿಗೇ ಪ್ರಾಮುಖ್ಯತೆ ನೀಡಿದ್ದೂ ಸೋಲಿನ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನಾರೋಗ್ಯದ ಕಾರಣ ಸುತ್ತಲಿನ ಹಳ್ಳಿಗಳಿಗೆ ಭೇಟಿ ನೀಡಲಾಗದ ಪ್ರಸಾದ್ ತಮ್ಮ ಸಮುದಾಯದ ಜನತೆಯನ್ನೂ ಭೇಟಿ ಮಾಡಲಾಗದೆ ಕೇವಲ ನಂಜನಗೂಡು ಪಟ್ಟಣಕ್ಕೇ ತಮ್ಮ ಪ್ರಚಾರವನ್ನು ಸೀಮಿತಗೊಳಿಸಿದ್ದರು. ಇದನ್ನೇ ಬಳಸಿಕೊಂಡ ಕಾಂಗ್ರೆಸ್, ಪ್ರಸಾದ್ ತಮ್ಮ ಮತದಾರರಿಂದ ದೂರ ಇದ್ದಾರೆ ಎಂದು ಪ್ರಚಾರ ಮಾಡಿ ತನ್ನ ಮತಬ್ಯಾಂಕ್ ಹೆಚ್ಚಿಸಿಕೊಂಡಿದೆ.

ತಾವು ಸಚಿವರಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನದಟ್ಟು ಮಾಡುವಲ್ಲಿಯೂ ಪ್ರಸಾದ್ ವಿಫಲರಾಗಿದ್ದು, ಕಾಂಗ್ರೆಸ್ ಇದು ಸರ್ಕಾರದ ಅಭಿವೃದ್ಧಿಯ ಕಾರ್ಯ ಎಂದು ಪ್ರಚಾರ ಮಾಡುವ ಮೂಲಕ ಲಾಭ ಗಳಿಸಿದೆ. ಮಾಜಿ ಸಚಿವ ದಿವಂಗತ ಮಹದೇವು ಅವರ ಮನೆಗೆ ಭೇಟಿ ನೀಡಲೂ ಸಾಧ್ಯವಾಗದೆ ಶ್ರೀನಿವಾಸ್ ಪ್ರಸಾದ್ ಲಿಂಗಾಯತ ಮತದಾರರನ್ನೂ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಶ್ರೀನಿವಾಸ್ ಪ್ರಸಾದ್ ಅವರ ಬಹುತೇಕ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರೇ ಆಗಿದ್ದು ತಮ್ಮ ನಾಯಕರೊಡನೆ ಪಕ್ಷ ನಿಷ್ಠೆ ಬದಲಿಸದಿರುವುದು ಪ್ರಸಾದ್ ಅವರ ಸೋಲಿಗೆ ಕಾರಣವಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೂ ಶ್ರೀನಿವಾಸ್ ಪ್ರಸಾದ್ ಅನಾರೋಗ್ಯದ ಕಾರಣ ಜನರೊಡನೆ ನಿಕಟ ಸಂಪರ್ಕ ಹೊಂದಿರಲಿಲ್ಲ ಎನ್ನುವುದು ಗುಟ್ಟಿನ ಮಾತೇನಲ್ಲ.

ತಮ್ಮ ಇಳಿ ವಯಸ್ಸಿನಲ್ಲಿ ರಾಜಕೀಯ ನಿವೃತ್ತಿ ಘೋಷಿಸಿ ಸಮಾಜಸೇವೆ, ಜನಸೇವೆಯಲ್ಲಿ ತೊಡಗುವ ಬದಲು ಅಧಿಕಾರ ದಾಹದಿಂದ ಪಕ್ಷಾಂತರ ಮಾಡಿದ ಪ್ರಸಾದಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ, ರಾಜಕೀಯ ಲಾಭಕ್ಕಾಗಿ ಏನನ್ನಾದರೂ ಬಾಚಿಕೊಳ್ಳುವ ರಾಜ್ಯ ಬಿಜೆಪಿಗೂ ಮತದಾರರು ಪಾಠ ಕಲಿಸಿದ್ದಾರೆ ಎನ್ನಲು ಅಡ್ಡಿಯಿಲ್ಲ.