ಭಾರತ-ಲಂಕಾ ತೃತೀಯ ಟೆಸ್ಟ್ ಧವನ್-ರಾಹುಲ್ ಭರ್ಜರಿ ಆಟ

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಆರಂಭಿಕ  ದಾಂಡಿಗರಾದ ಶಿಖರ್ ಧವನ್ ಹಾಗೂ  ಕೆ ಎಲ್ ರಾಹುಲ್  ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶನಿವಾರ  ಆರಂಭವಾದ ಶ್ರೀಲಂಕಾ ವಿರುದ್ಧದ ತೃತೀಯ  ಟೆಸ್ಟ್ ಪಂದ್ಯದ ಮೊದಲ ದಿನದ ಗೌರವ ಪಡೆಯಿತು. ಇವರಿಬ್ಬರು ಮೊದಲ ವಿಕೆಟಿಗೆ 188 ರನ್ ಸೇರಿಸಿದರು. ಇವರಿಬ್ಬರು ಔಟಾದ ಬಳಿಕ ಆತಿಥೇಯ ಬೌಲರುಗಳು ಭಾರತೀಯ ದಾಂಡಿಗರನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಕ್ಯಾಂಡಿ ಪಲ್ಲೆಕೆಲೆ  ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತೃತೀಯ  ಟೆಸ್ಟಿನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ,  ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿದೆ.

ಈ ಟೆಸ್ಟಿನಲ್ಲೂ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದ  ಶಿಖರ್ ಧವನ್ ಹಾಗೂ ರಾಹುಲ್  ನಾಯಕನ ನಿರ್ಧಾರವನ್ನು ಸಮರ್ಥಿಸುವ ಆಟವಾಡಿದರು.  ಮೊದಲ ಟೆಸ್ಟಿನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣರಾದ ಧವನ್ ಈ ಟೆಸಿಸ್ಟ್‍ನಲ್ಲಿ ಮತ್ತೊಮ್ಮೆ ಬ್ಯಾಟಿಂಗಿನಲ್ಲಿ ಮಿಂಚಿದರು. ಲಂಕಾ ಬೌಲರುಗಳನ್ನು ಮನಬಂದಂತೆ ದಂಡಿಸಿದ ಧವನ್ ಟೆಸ್ಟ್ ಕ್ರಿಕೆಟಿನಲ್ಲಿ ತನ್ನ ಆರನೇ ಶತಕವನ್ನು ದಾಖಲಿಸಿದರು. ಇವರು 123 ಎಸೆತಗಳಲ್ಲಿ 119 ರನ್ ಬಾರಿಸಿ ಪುಷ್ಪಕುಮಾರಗೆ ವಿಕೆಟ್ ಒಪ್ಪಿಸಿದರು.  ಧವನಗೆ ಉತ್ತಮ ಸಾಥ್ ನೀಡಿದ ರಾಹುಲ್ ಆಕರ್ಷಕ ಅರ್ಧ ಶತಕ ಬಾರಿಸಿದರು. ಈ  ಟೆಸ್ಟಿನಲ್ಲಿ 85 ರನ್ ಗಳಿಸಿದ ರಾಹುಲ್ ಟೆಸ್ಟ್ ಕ್ರಿಕೆಟಿನಲ್ಲಿ ಸತತ 7 ಅರ್ಧ ಶತಕ ದಾಖಲಿಸುವ ಮೂಲಕ ವಿಶ್ವದಾಖಲೆಯೊಂದನ್ನು ಸರಿಗಟ್ಟಿದರು. ದ್ವಿತೀಯ ಇನ್ನಿಂಗ್ಸಿನಲ್ಲಿ  ಒಂದುವೇಳೆ ರಾಹುಲ್ ಅರ್ಧ ಶತಕ ಬಾರಿಸಿದ್ದರೆ ವಿಶ್ವದಾಖಲೆಗೆ ಭಾಜನರಾಗಲಿದ್ದರು.

ಈ ಜೋಡಿ ಔಟಾದ ಬಳಿಕ ಭಾರತ ತಂಡದ ವಿಕೆಟುಗಳು ಬೇಗನೆ ಉರುಳಿದವು. ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಗಮನಾರ್ಹ ಬ್ಯಾಟಿಂಗ್ ನಡೆಸಿ ಶತಕ ದಾಖಲಿಸಿದ ಚೇತೇಶ್ವರ ಪೂಜಾರ ಕೇವಲ 8 ರನ್ನಿಗೆ ಔಟಾದರೆ, ಅಜಿಂಕ್ಯ ರಹಾನೆ ಕೂಡ 17 ರನ್ ಗಳಿಸಲು ಮಾತ್ರ ಶಕ್ತರಾದರು. ಆದರೆ, ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ 42 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಶ್ವಿನ್ 31 ರನ್ ಗಳಿಸಿದರು .  ಮೊದಲ ದಿನದಾಟ ಮುಕ್ತಾಯದ ವೇಳೆಗೆ ಭಾರತ ತಂಡ 6 ವಿಕೆಟಿಗೆ 329 ರನ್ ಹಾಕಿದೆ.  ವಿಕೆಟ್ ಕೀಪರ್ ಬಾಟ್ಸಮನ್ ವೃದ್ದಿಮಾನ್ ಸಾಹಾ ಹಾಗೂ ಹಾರ್ದಿಕ್ ಪಾಂಡ್ಯಾ ಎರಡನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಶ್ರೀಲಂಕಾ ಪರ ಮಿಲಿಂದಾ ಪುಷ್ಪಕುಮಾರ್ 40 ರನ್ನಿಗೆ 3 ವಿಕೆಟ್ ಪಡೆದು ಮಿಂಚಿದರು.