ಕಂಬಳ ನಿಷೇಧ ತೆರವು ಆಗ್ರಹಿಸಿ ಹೋರಾಟಕ್ಕೆ ಸದ್ಯವೇ ಚಾಲನೆ

ಜಲ್ಲಿಕಟ್ಟು ಹೋರಾಟದಿಂದ ಪ್ರಭಾವಿತರಾದ ಅಭಿಮಾನಿಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಮಿಳುನಾಡಿನ ಯಶಸ್ವೀ ಜಲ್ಲಿಕಟ್ಟು ಹೋರಾಟವು ಕರಾವಳಿ  ಜಿಲ್ಲೆಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ಅಭಿಮಾನಿಗಳಿಗೂ ಸ್ಫೂರ್ತಿಯಾಗುತ್ತಿದೆ.  ಜಲ್ಲಿಕಟ್ಟು ಕ್ರೀಡೆ ನಡೆಸಲು ತಮಿಳುನಾಡು ಇದೀಗ ಸಜ್ಜಾಗಿರುವಂತೆಯೇ ಇತ್ತ ಜಿಲ್ಲೆಯ ಕಂಬಳ ಸಮಿತಿಗಳು ಕಂಬಳ ನಿಷೇಧ ಹಿಂಪಡೆಯಲು ಒತ್ತಾಯಿಸುವ ಸಲುವಾಗಿ ತಮ್ಮ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಲು ಇಂದು ಮಂಗಳೂರಿನಲ್ಲಿ ಸಭೆ ಸೇರಲಿದ್ದಾರೆ.

“ಮುಂದಿನ ಬುಧವಾರ ಅಥವಾ ಗುರುವಾರದೊಳಗಾಗಿ ಮಂಗಳೂರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ದೇಶದ ಹಾಗೂ ರಾಜಕಾರಣಿಗಳ ಗಮನ ಸೆಳೆಯಲಾಗುವುದು. ಉಡುಪಿ ಹಾಗೂ ಮಂಗಳೂರಿನ ಕಂಬಳ ಅಭಿಮಾನಿಗಳಸಹಿತ 15ರಿಂದ 200 ಜತೆ  ಕಂಬಳದ ಕೋಣಗಳೂ ಈ ಪ್ರತಿಭಟನೆಯಲ್ಲಿ ಭಾಗವಹಿಸುವವು” ಎಂದು  ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಹೇಳಿದ್ದಾರೆ.

“ಜಲ್ಲಿಕಟ್ಟು ನಡೆಸಲು ಅನುಮತಿ ದೊರೆತಿರುವಾಗ ಕಂಬಳಕ್ಕೂ ಅನುಮತಿ ದೊರೆಯಬೇಕು. ಇಲ್ಲಿ ಹಿಂಸೆಗೆ ಆಸ್ಪದವಿಲ್ಲ. ಈ ಕ್ರೀಡೆ ನಮ್ಮ ಸಂಸ್ಕøತಿಯ ಒಂದು ಭಾಗ” ಎಂದು ಅವರು ಹೇಳಿದ್ದಾರೆ.

ಜಲ್ಲಿಕಟ್ಟು ಸಂಬಂಧ ಸುಪ್ರೀಂ ಕೋರ್ಟ್  ಆದೇಶದ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಸಲ್ಲಿಸಿದ ಅಪೀಲಿನನ್ವಯ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೈಕೋರ್ಟ್ ವಿಭಾಗೀಯ ಪೀಠವೊಂದು ತನ್ನ ಮಧ್ಯಂತರ  ಆದೇಶವೊಂದರಲ್ಲಿ ಕಂಬಳಕ್ಕೆ ತಡೆ ಹೇರಿತ್ತು.  ಈ ತಡೆಯಾಜ್ಞೆ ತೆರವುಗೊಳಿಸುವಂತೆ ಕಂಬಳ ಸಮಿತಿಗಳು ಮಧ್ಯಂತರ ಅಪೀಲು ಸಲ್ಲಿಸಿದ್ದರೂ ಹೈಕೋರ್ಟಿನ ವಿಭಾಗೀಯ ಪೀಠವು ಈ ಪ್ರಕರಣದ ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಿದೆ.

“ಪೆಟಾದ ದುರುದ್ದೇಶದಿಂದ ಕಂಬಳಕ್ಕೆ ತಡೆ ಹೇರಲಾಗಿದೆ. ನಮಗೆ ಕಾನೂನು ಹೋರಾಟದಲ್ಲಿ ಜಯ ಸಿಗುವ ಭರವಸೆಯಿದೆ. ಕಂಬಳ ಹಾಗೂ ಜಲ್ಲಿಕಟ್ಟು ನಡುವೆ ಬಹಳಷ್ಟು ವ್ಯತ್ಯಾಸವಿದೆ” ಎಂದು ಕಂಬಳ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಕಂಬಳಕ್ಕೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿಯೂ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ.