ಭಗ್ನಪ್ರೇಮಿಯಿಂದ ಪ್ರೇಯಸಿ, ಆಕೆ ತಾಯಿಗೆ ಗಂಭೀರ ಹಲ್ಲೆ

ಹಲ್ಲೆಗೊಳಗಾದ ಸುಜಾತ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಳೆದ ನಾಲ್ಕು ವರ್ಷಗಳಿಂದ ತನ್ನನ್ನು ಪ್ರೀತಿಸು ಎಂದು ಹುಡುಗಿಗೆ ದುಂಬಾಲು ಬೀಳುತ್ತಿದ್ದ ಯುವಕನೊಬ್ಬ ಇನ್ನು ತನ್ನ ಪ್ರೀತಿ ನನಗೆ ಸಿಗಲ್ಲ ಎಂದು ಆಕ್ರೋಶಭರಿತನಾಗಿ ಪ್ರೇಯಸಿ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಆರೋಪಿ ಯುವಕ ಪರಾರಿಯಾಗಿದ್ದಾನೆ.

ಇಲ್ಲಿನ ದತ್ತಾತ್ರೇಯ ಅಪಾರ್ಟಮೆಂಟ್ ನಿವಾಸಿ ಸುಜಾತ ಗಾಣಿಗ (42) ಎಂಬವರ ಮೇಲೆ ಅದೇ ಅಪಾರ್ಟಮೆಂಟಿನಲ್ಲಿ ವಾಸ ಮಾಡಿಕೊಂಡಿದ್ದ ನಿತಿನ್ ಎಂಬಾತ ಹಲ್ಲೆ ನಡೆಸಿದ್ದಾನೆ. ಸುಜಾತಾ ಗಾಣಿಗ ನಾಲ್ಕನೇ ಮಹಡಿಯಲ್ಲಿದ್ದರೆ, ಆರೋಪಿ ನಿತಿನ್ ಅದೇ ಕಟ್ಟಡದ ಏಳನೇ ಕೊಠಡಿಯಲ್ಲಿದ್ದ. ಪ್ರತಿನಿತ್ಯ ಸುಜಾತಾರ ಪುತ್ರಿಗೆ ಈತ ಪ್ರೀತಿಸು ಎಂದು ದುಂಬಾಲು ಬೀಳುತ್ತಿದ್ದ ಎನ್ನಲಾಗಿದೆ.

ಆರೋಪಿ ನಿತಿನ್
ಆರೋಪಿ ನಿತಿನ್

ನಿತಿನ್ ಕಳೆದ ಮೂರ್ನಾಲ್ಕು ವರ್ಷಗಳಿಂದ ಸುಜಾತರ ಮಗಳಿಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ. ಆದರೆ ಆಕೆ ಅದನ್ನು ನಯವಾಗಿಯೇ ತಿರಸ್ಕರಿಸಿದ್ದಳು. ಭಾನುವಾರದಂದು ಫ್ಲಾಟಿನ ಲಿಫ್ಟಿನಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಸುಜಾತಾ ಹಾಗೂ ಆಕೆ ಪುತ್ರಿಯನ್ನು ಕಂಡ ನಿತಿನ್ ಅಲ್ಲಿಗೆ ತನ್ನ ಸ್ನೇಹಿತರ ಜೊತೆಗೆ ಬಂದು ಇವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸುಜಾತರಿಗೆ ಕಲ್ಲು, ರಾಡಿನಿಂದ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಇದೀಗ ಗಾಯಗೊಂಡಿರುವ ಸುಜಾತಾ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಆರೋಪಿ ನಿತಿನಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಆರೋಪಿ ನಿತಿನ್ ನನ್ನ ಮಗಳ ಮೇಲೆ ಮಾಡಿದ ದಾಳಿಯಂತಹ ಕೃತ್ಯಗಳನ್ನು ಇನ್ನು ಯಾರಿಗೂ ಮಾಡಬಾರದು ಎಂದುವರು ಹೇಳಿದ್ದಾರೆ.

ಆರೋಪಿ ನಿತಿನ್ ವಿರುದ್ಧ ಈ ಹಿಂದೆ ಕುಂದಾಪುರ ಠಾಣೆಗೆ ಸುಜಾತಾ ಅವರು ದೂರು ನೀಡಲು ಮುಂದಾದಾಗ ಆತ ಸುಜಾತರ ಕೈಕಾಲು ಹಿಡಿದುಕೊಂಡು ನನ್ನನ್ನು ಬಿಟ್ಟುಬಿಡಿ ಎಂದು ಅಂಗಾಲಾಚಿದ್ದ. ನನ್ನ ಮರ್ಯಾದೆ ಹೋಗುತ್ತದೆ ಎಂದು ಅತ್ತುಬಿಟ್ಟಿದ್ದ ಎಂದು ಸುಜಾತ ಹೇಳಿದ್ದಾರೆ. ಪ್ರಸ್ತುತ ಸುಜಾತರ ಪತಿ ದುಬೈನಲ್ಲಿ ಉದ್ಯೋಗದಲ್ಲಿದ್ದು, ಅವರು ಬಂದ ಬಳಿಕ ಆರೋಪಿ ಪತ್ತೆಗೆ ಪೊಲೀಸರಲ್ಲಿ ಹೆಚ್ಚಿನ ಒತ್ತಡ ಹಾಕುವುದಾಗಿ ಅವರು ಹೇಳಿದ್ದಾರೆ.

ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ಗಾಣಿಗ ಸೇವಾ ಸಮಿತಿ ಕಾರ್ಯದರ್ಶಿ ಶಿವಾನಂದ ರಾವ್ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಠಾಣಾಧಿಕಾರಿ ನಾಸೀರ್ ಹುಸೇನ್ ಆಸ್ಪತ್ರೆಗೆ ತೆರಳಿ ಆಕೆ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.