ಖಾರ ತಿಂದರೆ ಆಯುಷ್ಯವೃದ್ಧಿ !

ಹೆಚ್ಚು ಮಸಾಲೆ ಬಳಸಿರುವ ಮತ್ತು ಖಾರವಾಗಿರುವ ಆಹಾರ ಸೇವಿಸುವವರಿಗೆ ಒಂದು ಸಿಹಿ ಸುದ್ದಿ. ಹೆಚ್ಚಿನ ಮಸಾಲೆ ಪದಾರ್ಥಗಳು ಮತ್ತು ಮೆಣಸಿನ ಖಾರ ಬಳಸುವುದರಿಂದ ಖಾದ್ಯದ ರುಚಿಯೂ ಹೆಚ್ಚಾಗುತ್ತದೆ ಮತ್ತು ಮನುಷ್ಯನ ಜೀವಿತಾವಧಿಯೂ ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯೊಂದರಲ್ಲಿ ಹೇಳಲಾಗಿದೆ.

ವರ್ಮಾಂಟ್ ವಿಶ್ವವಿದ್ಯಾಲಯದ ಲಾರ್ನರ್ ಕಾಲೇಜ್ ಆಫ್ ಮೆಡಿಸಿನ್ ಸಂಸ್ಥೆಯ ವೈದ್ಯರು ನಡೆಸಿರುವ ಸಂಶೋಧನೆಯ ಪ್ರಕಾರ ಈ ಮಾಹಿತಿ ಲಭ್ಯವಾಗಿದ್ದು 18ರಿಂದ 23 ವರ್ಷದೊಳಗಿನ ಯುವಕರನ್ನು ಪರೀಕ್ಷಿಸಿ ಈ ಸಂಶೋಧನೆ ನಡೆಸಲಾಗಿದೆ ಎನ್ನಲಾಗಿದೆ.

ತಮ್ಮ ಸಮೀಕ್ಷೆಯಲ್ಲಿ ವೈದ್ಯರು ಪರೀಕ್ಷಾರ್ಥಿಗಳ ಮೆಣಸಿನ ಖಾರದ ಸೇವನೆಯ ಪ್ರಮಾಣವನ್ನು ಆಧರಿಸಿ ಅವರ ಗುಣಲಕ್ಷಣಗಳನ್ನು ಪರೀಕ್ಷಿಸಿದ್ದಾರೆ. ಮೆಣಸು ಮತ್ತು ಮಸಾಲೆ ಪದಾರ್ಥಗಳ ಬಳಕೆ ಆರೋಗ್ಯಕ್ಕೆ ಒಳ್ಳೆಯದು ಎಂದು  ಶತಮಾನಗಳಿಂದ ಹೇಳಲಾಗುತ್ತಿದ್ದರೂ ಈ ಕುರಿತು ಹೆಚ್ಚಾಗಿ ಅಧ್ಯಯನ ನಡೆದಿರಲಿಲ್ಲ.

2015ರಲ್ಲಿ ಚೀನಾದಲ್ಲಿ ನಡೆಸಲಾದ ಇದೇ ರೀತಿಯ ಸಂಶೋಧನೆಯೊಂದರಲ್ಲಿ ಮೆಣಸಿನ ಖಾರದ ಬಳಕೆ ಮತ್ತು ಜೀವಿತಾವಧಿಯ  ನಡುವೆ ಇರುವ ಸಂಬಂಧವನ್ನು ಕುರಿತು ಅಧ್ಯಯನ ನಡೆಸಲಾಗಿತ್ತು. ಹೆಚ್ಚಿನ ಮಸಾಲೆ ಖಾರದ ಪದಾರ್ಥ ಸೇವಿಸುವವರು ಯೌವ್ವನ ಕಾಪಾಡಿಕೊಂಡಿರುವುದನ್ನು ಗಮನಿಸಲಾಗಿದ್ದು, ಇವರು ಹೆಚ್ಚಿನ ಮದ್ಯಸೇವನೆ, ಸಿಗರೇಟ್ ಸೇವನೆ ಮತ್ತು ತರಕಾರಿ ಸೇವನೆ ಮಾಡುವುದರ ಮೂಲಕ ಕಡಿಮೆ ಕೊಬ್ಬಿನ ಅಂಶ ಹೊಂದಿರುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಇದರಿಂದ ಹೃದಯ ಖಾಯಿಲೆ ಮತ್ತು ಪಾಶ್ರ್ವವಾಯು ರೋಗದ ಸಂಭವವೂ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ.

ಕೆಂಪು ಮೆಣಸಿನಕಾಯಿಯಲ್ಲಿರುವ ಬಿ ಮತ್ತು ಸಿ ವಿಟಮಿನ್ ಅಂಶಗಳು ಹಾಗೂ ಎ ವಿಟಮಿನ್ ಅಂಶಗಳು ಈ ಸಕಾರಾತ್ಮಕ ಪರಿಣಾಮಕ್ಕೆ ಕಾರಣ ಎನ್ನಲಾಗಿದೆ. ಈ ಮಸಾಲೆಯುಕ್ತ ಪದಾರ್ಥ ಸೇವನೆಯಿಂದ ಆಹಾರ ಪದ್ಧತಿಯ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.