ಅಮ್ಮನ ಮಡಿಲಲ್ಲಿ ಆದಷ್ಟು ಸಮಯ ಕಳೆಯಿರಿ

ನಮ್ಮೆಲ್ಲರ ಜನ್ಮಜಾತೆ ನಮ್ಮ ಜೀವದ ಕಣಕಣಗಳಲ್ಲಿಯೂ ನಮ್ಮಲ್ಲಿ ಶಕ್ತಿ ತುಂಬಿಸಿ ನಮ್ಮನ್ನು ಅತ್ಯಂತ ಪ್ರೀತಿಯಿಂದ ಲಾಲಿಸಿ ಪೋಷಿಸಿದವಳು. ಆಕೆಯಿಲ್ಲದ ಬಾಳನ್ನು ಊಹಿಸುವುದೂ ಅಸಾಧ್ಯ. ವಾತ್ಸಲ್ಯಮಯಿಯಾಗಿರುವ ತಾಯಿ ಸದಾ ನಮ್ಮ ಕಣ್ಣ ಮುಂದಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ನಾವು ಬೆಳೆದು ದೊಡ್ಡವರಾದಾಗ ಇದು ಸಾಧ್ಯವಿಲ್ಲವೆಂಬ ವಾಸ್ತವದ ಅರಿವು ನಮಗಾಗುತ್ತದೆ. ಆದರೂ ಆಕೆಯ ಆಯುಷ್ಯ ಹೆಚ್ಚಿಸುವಲ್ಲಿ ಆಕೆಯ ಮಕ್ಕಳ ಪಾತ್ರವಿದೆಯೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮಕ್ಕಳು ಸಣ್ಣವರಿರುವಾಗ ಅಥವಾ ದೊಡ್ಡವರಾದಾಗ ಅವರು ತಮ್ಮ ತಾಯಿಯ ಜತೆ ಎಷ್ಟು ಸಮಯ ಕಳೆಯುತ್ತಾರೆಯೋ ಅಷ್ಟೇ ಒಳ್ಳೆಯದು. ಇನ್ನೊಂದು ವಿಧದಲ್ಲಿ ಹೇಳುವುದಾದರೆ ನಮ್ಮ ತಾಯಿಯ ಜತೆ ನಾವು ಹೆಚ್ಚು ಸಮಯ ಕಳೆದಷ್ಟು ಆಕೆ ಹೆಚ್ಚು ಕಾಲ ಬದುಕುತ್ತಾಳೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞರು ಇತ್ತೀಚೆಗೆ ನಡೆಸಿದ ಸಂಶೋಧನೆಯಂತೆ ಹಿರಿಯ ಜೀವಗಳ ಆಯುಷ್ಯವು ಅವರ ಜತೆಗೆ ಅವರ ಪ್ರೀತಿಪಾತ್ರರು ಎಷ್ಟು ಸಮಯ ಇರುತ್ತಾರೆಂಬುದುರ ಮೇಲೆ ಅವಲಂಬಿತವಾಗಿದೆ. ಎಪ್ಪತ್ತರ ಅಸುಪಾಸಿನ ಸುಮಾರು 1,600 ಜನರನ್ನು ಈ ಸಂಶೋಧನೆಗೆ ಬಳಸಲಾಗಿತ್ತು.  ಇದರ ಫಲಿತಾಂಶದಂತೆ ಒಬ್ಬಂಟಿಯಾಗಿರುವವರು ತಮ್ಮ ಕುಟುಂಬ ಸದಸ್ಯರ ಜತೆಗಿರುವವರಿಗಿಂತ ಕಡಿಮೆ ಸಮಯ ಬದುಕುತ್ತಾರೆ.

ಪ್ರೀತಿಪಾತ್ರರಿಂದ ದೂರವಾಗಿ ಒಂಟಿತನದಿಂದ, ಬೇಸರದಿಂದ ದಿನ ದೂಡುವ ಹಿರಿಯ ನಾಗರಿಕರು ಹೆಚ್ಚು ಕಾಲ ಬದುಕುವುದು ಕಷ್ಟಕರವಾಗಿ ಬಿಡುತ್ತದೆ. ಇದೇ ಕಾರಣದಿಂದ ಕೆಲವರು ವೃದ್ಧಾಶ್ರಮದಲ್ಲಿದ್ದರೂ ಸಂತೋಷದಿಂದ ದೀರ್ಘಕಾಲ ಬದುಕುತ್ತಾರೆ. ತಮ್ಮ ಕುಟುಂಬದ ಸದಸ್ಯರಂತೆಯೇ ಅಲ್ಲಿ ಅವರಿಗೆ ಪ್ರೀತಿ ಪಾತ್ರರು ದೊರೆಯುವುದರಿಂದ ಇದು ಸಾಧ್ಯವಾಗುತ್ತದೆ. ಅಲ್ಲಿಯೂ ಅವರಂತೆಯೇ ವೃದ್ಧರಿರುವರಾದರೂ, ಅವರನ್ನು ಆರೈಕೆ ಮಾಡುವ ದಾದಿಯರು ಹಾಗೂ ಸಹಾಯಕರು ಹೆಚ್ಚಾಗಿ ಯುವಕ ಯುವತಿಯರಾಗಿರುವುದರಿಂದ ಈ ಹಿರಿಯ ಜೀವಗಳು ಅವರಲ್ಲಿ ತಮ್ಮ ಮಕ್ಕಳನ್ನು ಕಂಡು ಅವರಲ್ಲಿ ಸಂತಸದಿಂದ ಬೆರೆತು ತಮ್ಮ ಜೀವನ ಕಳೆಯುತ್ತಾರೆ.

ಹಿರಿಯ ಜೀವಗಳನ್ನು ನಿರ್ಲಕ್ಷಿಸದಿರಿ ಎನ್ನುವುದಕ್ಕೆ ಈ ಒಂದು ಸಂಶೋಧನೆ ಒಂದು ಉತ್ತಮ ಉದಾಹರಣೆ. ತಾಯಿ ಕೇವಲ ತಾಯಿಯಾಗಿರದೆ ತಮ್ಮ ಮಕ್ಕಳ ಅತ್ಯಂತ ಆತ್ಮೀಯ ಗೆಳತಿಯೂ ಆಗುತ್ತಾಳೆ. ಹೆತ್ತವರ ಜತೆಗೆ ಆದಷ್ಟು ಸಮಯ ಕಳೆಯಿರಿ, ಅವರ ಮನಸ್ಸಿಗೆ ಸಂತೋಷ ನೆಮ್ಮದಿ ನೀಡಿ, ಅದಕ್ಕಿಂತ ಹೆಚ್ಚೇನನ್ನೂ ಅವರು ನಿಮ್ಮಿಂದ ನಿರೀಕ್ಷಿಸುವುದಿಲ್ಲ.

 

LEAVE A REPLY